ಮೂಡುಬಿದಿರೆ: ಬೈಕ್‌ಗೆ ಡಿಕ್ಕಿ ಸಂಭವಿಸುವುದನ್ನು ತಪ್ಪಿಸುವ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿ ನಿವೃತ್ತ ಶಿಕ್ಷಕ ಹಾಗೂ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರೊಬ್ಬರು ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆ ಪೇಟೆಯ ಗ್ಯಾರೇಜ್ ಸಮೀಪ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ವೇಣುಗೋಪಾಲ ಕಾಲೋನಿ ನಿವಾಸಿ, ನಿವೃತ್ತ ಶಿಕ್ಷಕ ಜಿ.ಕೆ. ಭಟ್ ಎಂದು ಗುರುತಿಸಲಾಗಿದೆ. ಅವರು ಇತರ ಪ್ರಯಾಣಿಕರೊಂದಿಗೆ ಮರಿಯಾಡಿ ನಿವಾಸಿ ಅಹಮದ್ ಚಾಲನೆ ಮಾಡುತ್ತಿದ್ದ ಆಟೋ ರಿಕ್ಷಾದಲ್ಲಿ ಮೂಡುಬಿದಿರೆ ಕಡೆಗೆ ಪ್ರಯಾಣಿಸುತ್ತಿದ್ದರು.
ಮಾರ್ಗಮಧ್ಯೆ ಎದುರಾದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ತುರ್ತಾಗಿ ಬ್ರೇಕ್ ಹಾಕಿದ ಪರಿಣಾಮ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಜಿ.ಕೆ. ಭಟ್ ವಾಹನದಿಂದ ಹೊರಕ್ಕೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
ಗಾಯಾಳುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜಿ.ಕೆ. ಭಟ್ ಅವರು ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





