23 July 2026 |

ಬರಿಮಾರ್ ಬಸ್ ದುರಂತ: ಆಸ್ಪತ್ರೆಗೆ ಧಾವಿಸಿದ ಶಾಸಕ ರಾಜೇಶ್ ನಾಯ್ಕ್; ವೈದ್ಯರೊಂದಿಗೆ ಚಿಕಿತ್ಸೆ ಕುರಿತು ಚರ್ಚೆ, ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಭೇಟಿ

  • 23 Jul 2026 12:24:42 AM

ಬಂಟ್ವಾಳ: ಬರಿಮಾರು ಸಮೀಪ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

 

ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಅವರು, ಬಾಲಕಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು. ಇತರ ಗಾಯಾಳು ಮಕ್ಕಳು ಹಾಗೂ ಬಸ್ ಚಾಲಕರ ಆರೋಗ್ಯದ ಬಗ್ಗೆಯೂ ನಿರಂತರ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

 

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಸಂಸ್ಥೆಯ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗೆ ಮಾತನಾಡಿ ಘಟನೆಯ ಕುರಿತು ಮಾಹಿತಿ ಕೂಡ ಪಡೆದುಕೊಂಡರು. 

 

ಇದೇ ವೇಳೆ ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಚರಣಿಗೆ ಅಂತಿಮ ನಮನ ಸಲ್ಲಿಸಿದ ಶಾಸಕ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಅಗತ್ಯ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

 

ಗಾಯಗೊಂಡಿರುವ ಎಲ್ಲ ಮಕ್ಕಳು ಶೀಘ್ರ ಗುಣಮುಖರಾಗಲಿ ಹಾಗೂ ಮೃತ ಬಾಲಕಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶಾಸಕ ರಾಜೇಶ್ ನಾಯ್ಕ್ ಪ್ರಾರ್ಥಿಸಿದ್ದಾರೆ.

 

ಬೆಂಗಳೂರಿನಲ್ಲಿ ವಿಧಾನಮಂಡಲ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ದುರ್ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರನ್ನು ಸಂಪರ್ಕಿಸಿ ಗಾಯಾಳು ಮಕ್ಕಳ ಚಿಕಿತ್ಸೆಗೆ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಭೆಯ ಕಾರ್ಯ ಮುಗಿದ ತಕ್ಷಣವೇ ಬೆಂಗಳೂರಿನಿಂದ ನೇರವಾಗಿ ಮಂಗಳೂರಿಗೆ ಆಗಮಿಸಿ ಬಾಲಕಿಯ ಆರೋಗ್ಯ ಕೂಡ ವಿಚಾರಿಸಿದ್ದೇನೆ ಎಂದು ತಿಳಿಸಿದ್ದಾರೆ.