23 July 2026 |

ರೇಷನ್ ಕಾರ್ಡ್‌ದಾರರಿಗೆ ಮಹತ್ವದ ಮಾಹಿತಿ: ಇನ್ನು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರಲಿವೆ

  • 23 Jul 2026 01:56:07 AM

ಬೆಂಗಳೂರು: ರಾಜ್ಯದ ರೇಷನ್ ಕಾರ್ಡ್‌ದಾರರಿಗೆ ಅನುಕೂಲವಾಗುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಜುಲೈ ತಿಂಗಳ ಆಹಾರಧಾನ್ಯ ವಿತರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ.  

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಹಾಗೂ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆ ವಿಳಂಬವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯ ತಲುಪಿದ ತಕ್ಷಣವೇ ವಿತರಣೆಯನ್ನು ಆರಂಭಿಸಿ, ಜುಲೈ ತಿಂಗಳ ವಿತರಣೆಯನ್ನು ಪೂರ್ಣಗೊಳಿಸುವಂತೆ ಇಲಾಖೆಯು ಸೂಚಿಸಿದೆ.  

 

ಇದೇ ವೇಳೆ, ಜುಲೈ ತಿಂಗಳ ವಿತರಣೆ ಪೂರ್ಣಗೊಳ್ಳುವವರೆಗೆ ಯಾವುದೇ ವಾರದ ರಜೆ ಇಲ್ಲದೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲಿವೆ. ಜಿಲ್ಲೆಯ ಅಧಿಕಾರಿಗಳಿಗೆ ವಿತರಣಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.