06 August 2026 |

ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ: ಕಸದ ರಾಶಿ, ಜಾನುವಾರುಗಳ ಕಾಟದಿಂದ ಪ್ರಯಾಣಿಕರ ಸಂಕಷ್ಟ

  • 23 Jul 2026 11:05:32 AM

ಸುಬ್ರಹ್ಮಣ್ಯ:ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ಪ್ರಮುಖ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಿಲ್ದಾಣದ ಆವರಣದಲ್ಲಿ ಕಸದ ರಾಶಿ ಹಾಗೂ ಜಾನುವಾರುಗಳ ಮುಕ್ತ ಸಂಚಾರದಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

 

ಸ್ಥಳೀಯರ ಮಾಹಿತಿ ಪ್ರಕಾರ, ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ಜಾನುವಾರುಗಳು ಬಸ್ ನಿಲ್ದಾಣದೊಳಗೆ ಪ್ರವೇಶಿಸಿ ಕಸ ಸಂಗ್ರಹಿಸುವ ಡಬ್ಬಿಗಳನ್ನು ಉರುಳಿಸುತ್ತಿವೆ. ಇದರ ಪರಿಣಾಮವಾಗಿ ಪ್ಲಾಸ್ಟಿಕ್, ಆಹಾರ ತ್ಯಾಜ್ಯ ಮತ್ತು ಇತರ ಕಸಗಳು ನಿಲ್ದಾಣದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದು, ಪರಿಸರ ಅಸ್ವಚ್ಛವಾಗುತ್ತಿದೆ.

 

ಮುಂಜಾನೆ ವೇಳೆಯಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ದುರ್ವಾಸನೆಯ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರಯಾಣಿಕರು ಭೇಟಿ ನೀಡುವ ಸ್ಥಳದಲ್ಲಿ ಇಂತಹ ಸ್ಥಿತಿ ಕಂಡುಬರುವುದು ಬೇಸರದ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

 

ಈ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಜಾನುವಾರುಗಳ ಪ್ರವೇಶವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿರುವುದಾಗಿ ಸಾರ್ವಜನಿಕರು ಹೇಳಿದ್ದಾರೆ.

 

ಬಸ್ ನಿಲ್ದಾಣದಲ್ಲಿ ರಾತ್ರಿ ಪಾಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರ ಜೊತೆಗೆ, ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದು ಬಸ್ ನಿಲ್ದಾಣವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿ ನಿರ್ವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.