06 August 2026 |

ಬೊಳುವಾರು–ಹಾರಾಡಿ ರಸ್ತೆ ಕಾಮಗಾರಿ ವಿಳಂಬ: ಸಂಚಾರಕ್ಕೆ ತೊಂದರೆ, ಸಾರ್ವಜನಿಕರ ಆಕ್ರೋಶ

  • 23 Jul 2026 12:25:59 PM

ಪುತ್ತೂರು: ಬೊಳುವಾರು–ಹಾರಾಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ನಾಲ್ಕು ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆಗಳು ವ್ಯಕ್ತವಾಗುತ್ತಿವೆ.

 

ರಸ್ತೆ ನಿರ್ಮಾಣ ಕಾರ್ಯದ ನಂತರ ಕೈಗೊಳ್ಳಬೇಕಿದ್ದ ಮೋರಿ ನಿರ್ಮಾಣವನ್ನು ಮಧ್ಯದಲ್ಲೇ ಆರಂಭಿಸಿರುವುದರಿಂದ ಕಾಮಗಾರಿ ವಿಳಂಬವಾಗಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಥಳೀಯರ ಪ್ರಕಾರ, ಯೋಜನೆಯ ಒಟ್ಟು ಕೆಲಸದಲ್ಲಿ ಅರ್ಧ ಭಾಗವೂ ಇನ್ನೂ ಪೂರ್ಣಗೊಂಡಿಲ್ಲ.

 

ಹಾರಾಡಿ ರೈಲ್ವೆ ಸೇತುವೆ ಅಡಿಭಾಗದಲ್ಲಿ ಕಾಮಗಾರಿ ನಡೆಸುವ ಉದ್ದೇಶದಿಂದ ಕಳೆದ ಜೂನ್ 18ರಿಂದ ಜುಲೈ 18ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರ ಪರಿಣಾಮವಾಗಿ ವಾಹನ ಸವಾರರು ಸುಮಾರು ನಾಲ್ಕು ಕಿಲೋಮೀಟರ್ ಹೆಚ್ಚುವರಿ ಮಾರ್ಗ ಬಳಸಿಕೊಂಡು ಪುತ್ತೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸಿದ್ದರು.

 

ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಯ ಮಧ್ಯಭಾಗಕ್ಕೆ ಮಣ್ಣು ತುಂಬಿಸಿ ತಾತ್ಕಾಲಿಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಒಂದೇ ವಾಹನ ಸಂಚರಿಸುವಷ್ಟು ಮಾತ್ರ ಜಾಗ ಇರುವುದರಿಂದ ಎರಡೂ ದಿಕ್ಕಿನ ವಾಹನಗಳು ಸರದಿಯಲ್ಲಿ ನಿಂತು ಸುಮಾರು 15 ನಿಮಿಷಗಳವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಪ್ರತಿದಿನ ಇದೇ ಸಮಸ್ಯೆ ಎದುರಿಸುತ್ತಿರುವ ವಾಹನ ಸವಾರರು, ರಸ್ತೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಸುಗಮ ಸಂಚಾರಕ್ಕೆ ಯಾವಾಗ ಅವಕಾಶ ಸಿಗಲಿದೆ ಎಂದು ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸುತ್ತಿದ್ದಾರೆ.

 

ಕಾಮಗಾರಿ ಸ್ಥಳದಲ್ಲಿ ದಿನವೂ ಕೇವಲ ಮೂರುರಿಂದ ನಾಲ್ಕು ಮಂದಿ ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಜೆಸಿಬಿ ಸೇರಿದಂತೆ ಹಲವು ಭಾರೀ ಯಂತ್ರೋಪಕರಣಗಳು ಹಲವು ದಿನಗಳಿಂದ ಬಳಕೆಯಾಗದೆ ನಿಂತಿರುವುದರಿಂದ ಕಾಮಗಾರಿಯ ವೇಗದ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

 

ಒಂದು ಮೋರಿ ನಿರ್ಮಾಣಕ್ಕೆ ಕೆಲವೇ ಕಾರ್ಮಿಕರನ್ನು ನಿಯೋಜಿಸಿರುವ ಪರಿಸ್ಥಿತಿಯಲ್ಲಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯರು ವ್ಯಂಗ್ಯವಾಡುತ್ತಿದ್ದಾರೆ.

 

ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅಪೂರ್ಣ ಕಾಮಗಾರಿಯಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾರ್ಮಿಕರು ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

 

ಪ್ರಮುಖ ಸಂಪರ್ಕ ರಸ್ತೆಯಾಗಿರುವ ಬೊಳುವಾರು–ಹಾರಾಡಿ ರಸ್ತೆಯಲ್ಲಿ ಸುರಕ್ಷಿತ ಹಾಗೂ ನಿರಾತಂಕ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.