ಉಳ್ಳಾಲ: ರಸ್ತೆ ದುಸ್ಥಿತಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಉಳ್ಳಾಲ ಸಮೀಪದ ಪಾವೂರು ಗ್ರಾಮದಲ್ಲಿ ರಸ್ತೆ ಹದಗೆಟ್ಟ ಕಾರಣ ಆಂಬ್ಯುಲೆನ್ಸ್ ಮನೆವರೆಗೆ ತಲುಪಲು ಸಾಧ್ಯವಾಗದೇ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಆಟೋ ರಿಕ್ಷಾದ ಮೂಲಕ ಆಂಬ್ಯುಲೆನ್ಸ್‌ವರೆಗೆ ಕೊಂಡೊಯ್ಯಬೇಕಾದ ಘಟನೆ ನಡೆದಿದೆ.
ಪಾವೂರು ಗ್ರಾಮದ ಇನೋಳಿ ಕಲ್ಲಾಜೆ ನಿವಾಸಿಯಾಗಿರುವ ಸುಮಾರು 85 ವರ್ಷದ ಯಮುನಾ ಅವರು ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ತುರ್ತುವಾಗಿ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ, ರಸ್ತೆಯ ದುಸ್ಥಿತಿಯಿಂದ ವಾಹನ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯದಲ್ಲೇ ನಿಲ್ಲಬೇಕಾಯಿತು.
ಇದರಿಂದ ಕುಟುಂಬದವರು ಮತ್ತು ಸ್ಥಳೀಯರು ಆಟೋ ರಿಕ್ಷಾವನ್ನು ವ್ಯವಸ್ಥೆ ಮಾಡಿ, ಸಾಕಷ್ಟು ಕಷ್ಟಪಟ್ಟು ವೃದ್ಧೆಯನ್ನು ಆಂಬ್ಯುಲೆನ್ಸ್ ನಿಂತಿದ್ದ ಸ್ಥಳದವರೆಗೆ ಕರೆತಂದು ಬಳಿಕ ಆಸ್ಪತ್ರೆಗೆ ರವಾನಿಸಿದರು.
ಸ್ಥಳೀಯರ ಮಾಹಿತಿ ಪ್ರಕಾರ, ಈ ರಸ್ತೆಗೆ ಕೆಲವು ಸಮಯದ ಹಿಂದೆ ಮಣ್ಣು ಹಾಕಲಾಗಿದ್ದು, ಅದಾದ ಬಳಿಕ ವಾಹನ ಸಂಚಾರ ಮಾತ್ರವಲ್ಲದೆ ಕಾಲ್ನಡಿಗೆಯಲ್ಲೂ ಓಡಾಡಲು ಕಷ್ಟಕರ ಪರಿಸ್ಥಿತಿ ಉಂಟಾಗಿದೆ. ಈ ಸಮಸ್ಯೆ ಕುರಿತು ಕಳೆದ ತಿಂಗಳೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಲಾಗಿತ್ತು.
ನಂತರ ಮಣ್ಣನ್ನು ತೆರವುಗೊಳಿಸಿದರೂ ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸದ ಕಾರಣ ಮಳೆಯ ನೀರಿನಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.





