ಪುತ್ತೂರು: ಸೇಡಿಯಾಪು ಸಮೀಪದ ಕಾಪು ಪ್ರದೇಶದಲ್ಲಿ ಸರಕು ಸಾಗಣೆ ವಾಹನವೊಂದು ಪಲ್ಟಿಯಾದ ಪರಿಣಾಮ 11 ವರ್ಷದ ಬಾಲಕ ಗಾಯಗೊಂಡ ಘಟನೆ ಜುಲೈ 23ರಂದು ನಡೆದಿದೆ.
ಕೊಯಿಲಾ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಟಾಟಾ ಏಸ್ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವಾಹನದ ಚಕ್ರಗಳು ರಸ್ತೆಯ ಬದಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ವಾಹನದಲ್ಲಿದ್ದ ಅಬ್ದುಲ್ ಮಜೀದ್ ಅವರ ಪುತ್ರ ಮೊಹಮ್ಮದ್ ಅಮೀನ್ (11) ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆಯ ಅಂಚುಗಳಿಗೆ ಮಣ್ಣು ತುಂಬದ ಕಾರಣ ಆಳವಾದ ಅಂತರ ನಿರ್ಮಾಣವಾಗಿದೆ. ಜೊತೆಗೆ, ಡಿವೈಡರ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಅಪಾಯ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.





