25 July 2026 |

ಹೆಣ್ಣು ಮಗು ಜನಿಸಿದ್ದಕ್ಕೆ 13 ದಿನಗಳ ಕಂದಮ್ಮನ ಹತ್ಯೆ; ತಂದೆ ವಿರುದ್ಧ ಗಂಭೀರ ಆರೋಪ

  • 24 Jul 2026 05:35:00 PM

ಹೆಣ್ಣು ಮಗು ಎಂಬ ಕಾರಣಕ್ಕೆ ಕೇವಲ 13 ದಿನಗಳ ಪುಟ್ಟ ಕಂದಮ್ಮನನ್ನೇ ತಂದೆ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

ಆರೋಪಿ ಇಮ್ರಾನ್ ಮತ್ತು ಪತ್ನಿ ಮುಸ್ಕಾನ್ ದಂಪತಿಗೆ 13 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಜುಲೈ 22ರ ರಾತ್ರಿ ಮಲಗಿದ್ದ ಮಗುವನ್ನು ಇಮ್ರಾನ್ ಎತ್ತಿಕೊಂಡು ಹೋಗಿ ಮನೆಯ ನೀರಿನ ಸಂಪ್‌ಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

 

ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಮುಸ್ಕಾನ್ ಮಗು ಕಾಣಿಸದಿದ್ದರಿಂದ ಪತಿಯನ್ನು ಪ್ರಶ್ನಿಸಿದ್ದಾಳೆ. ಆದರೆ, ಮಗುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ ಇಮ್ರಾನ್, ಮನೆಯವರೊಂದಿಗೆ ಸೇರಿ ಮಗುವನ್ನು ಹುಡುಕುವ ನಾಟಕವನ್ನೂ ನಡೆಸಿದ್ದಾನೆ ಎನ್ನಲಾಗಿದೆ.

 

ಬಳಿಕ ಮನೆಯ ನೀರಿನ ಸಂಪ್ ಪರಿಶೀಲಿಸಿದ ವೇಳೆ 13 ದಿನಗಳ ಹೆಣ್ಣು ಮಗು ನೀರಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಇಮ್ರಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.