ಮಂಗಳೂರು: ಪ್ರತಿ ತಿಂಗಳು ಕಂತು ರೂಪದಲ್ಲಿ ಹಣ ಸಂಗ್ರಹಿಸಿ, ಬಹುಮಾನವಾಗಿ ಕಾರು, ಥಾರ್, ಫ್ಲ್ಯಾಟ್ ಸೇರಿದಂತೆ ಹಲವು ಆಕರ್ಷಕ ಉಡುಗೊರೆಗಳ ಭರವಸೆ ನೀಡಿದ್ದ ಅಸ್ತ್ರ ಗ್ರೂಪ್‌ನ ‘ಅಕ್ಷಯ ಪಾತ್ರೆ’ ಸ್ಕೀಂ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ.
ಮಂಗಳೂರಿನಲ್ಲಿರುವ ಅಸ್ತ್ರ ಗ್ರೂಪ್ ಕಚೇರಿಗೆ ಆಗಮಿಸಿದ ಹಲವು ಗ್ರಾಹಕರು ಮುತ್ತಿಗೆ ಹಾಕಿ, ತಮ್ಮ ಹಣದ ಕುರಿತು ಸಿಬ್ಬಂದಿಗಳ ಬಳಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಕಚೇರಿಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಹಿಂದೆ ಕೂಡ ಅಸ್ತ್ರ ಗ್ರೂಪ್ ವಿರುದ್ಧ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕ ಲಂಚುಲಾಲ್ ಕೆ.ಎಸ್. ಅವರು, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿ, ಗ್ರಾಹಕರ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು.
ಇದೀಗ ಮತ್ತೆ ಅಕ್ಷಯ ಪಾತ್ರೆ ಸ್ಕೀಂ ಕುರಿತಾದ ಆರೋಪಗಳು ಕೇಳಿಬರುತ್ತಿದ್ದು, ಗ್ರಾಹಕರು ಕಚೇರಿಗೆ ತೆರಳಿದ ವೀಡಿಯೋ ತುಣುಕು ವೈರಲ್ ಆಗಿದೆ. ಆದರೆ ವೈರಲ್ ಆಗುತ್ತಿರುವ ವೀಡಿಯೋದ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಗಳ ಸತ್ಯಾಸತ್ಯತೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.





