06 August 2026 |

ಮೊಡಂಕಾಪು ದೇವಸ್ಥಾನದಲ್ಲಿ ಕಳವು; ಮೂವರು ಶಂಕಿತರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

  • 25 Jul 2026 10:23:44 AM

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಳವು ಹಾಗೂ ಕಳವು ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

 

ದೇವಸ್ಥಾನದಲ್ಲಿದ್ದ ತಾಮ್ರ ಮತ್ತು ಹಿತ್ತಾಳೆಯಿಂದ ತಯಾರಿಸಲಾದ ಹಲವು ಪೂಜಾ ಪರಿಕರಗಳನ್ನು ಕಳ್ಳರು ಕಳವು ಮಾಡಿದ್ದು, ಭಕ್ತರು ಕಳೆದ ಸುಮಾರು ನಾಲ್ಕು ದಶಕಗಳಿಂದ ಸಮರ್ಪಿಸಿದ್ದ ಅಮೂಲ್ಯ ವಸ್ತುಗಳು ನಾಪತ್ತೆಯಾಗಿವೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ಶಂಕಿತ ವ್ಯಕ್ತಿಗಳ ಚಲನವಲನಗಳು ದಾಖಲಾಗಿವೆ.

 

ಕಳುವಾದ ವಸ್ತುಗಳಲ್ಲಿ ಹಳೆಯ ಕೊಪ್ಪರಿಗೆ, ಆರು ದೀಪಗಳು, ಸುಮಾರು 20 ಗಿಂಡೆಗಳು, ಹರಿವಾಣ ತಟ್ಟೆ, ಭಜನಾ ತಾಳ, ತಾಮ್ರದ ಕೊಡಪಾನ ಹಾಗೂ ತಾಮ್ರದ ಅಕ್ಕಿ ಸೋಸುವ ಪಾತ್ರೆ ಸೇರಿದಂತೆ ಹಲವು ಪೂಜಾ ಸಾಮಗ್ರಿಗಳು ಸೇರಿವೆ.

 

ಗುರುವಾರ ದೇವಸ್ಥಾನದ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೆಲವರನ್ನು ಸ್ಥಳೀಯರು ಪ್ರಶ್ನಿಸಿದಾಗ, ಕೆಲಸದ ನಿಮಿತ್ತ ಬಂದಿರುವುದಾಗಿ ಅವರು ತಿಳಿಸಿದ್ದರು. ಆದರೆ ಅನುಮಾನಗೊಂಡ ಸ್ಥಳೀಯರು ಮೂವರು ಶಂಕಿತರನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

 

ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಶಂಕಿತರನ್ನು ವಿಚಾರಣೆಗೊಳಪಡಿಸಿದ್ದು, ಕಳವು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.