ಕಡಬ: ದಿಢೀರ್ ಬೀಸಿದ ಬಿರುಗಾಳಿಯಿಂದ ಅಡಿಕೆ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ನಡೆದಿದೆ.
ಮೃತರನ್ನು 66 ವರ್ಷದ ಯಾದವ ಗೌಡ ಎಂದು ಗುರುತಿಸಲಾಗಿದೆ. ಅವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಬಿರುಗಾಳಿ ಬೀಸಿದ್ದು, ಅದರ ಪರಿಣಾಮ ಅಡಿಕೆ ಮರ ಮುರಿದು ಅವರ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ಗಣೇಶ್ ಸವಣೂರ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.





