ನವದೆಹಲಿ: ರಾಮ ಮಂದಿರದ ದೇಣಿಗೆ ಬಳಕೆ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ, ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಶುಕ್ರವಾರ ವಿಪಕ್ಷ ಸಂಸದರು ಸಂಸತ್ ಭವನದ ಹೊರಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪೂರ್ಣಿಯಾ ಸಂಸದ ಪಪ್ಪು ಯಾದವ್ ಕೇಸರಿ ವಸ್ತ್ರ ಧರಿಸಿ ಸಾಧುವಿನ ವೇಷದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಕೈಯಲ್ಲಿ ಸಾಂಕೇತಿಕ ಹುಂಡಿ ಹಿಡಿದು ಗಮನ ಸೆಳೆದರು. ರಾಮ ಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷ ಸಂಸದರು ಸಾಂಕೇತಿಕವಾಗಿ ಹುಂಡಿಗೆ ಕಾಣಿಕೆ ಹಾಕಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಈ ಪ್ರತಿಭಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದೇ ವೇಳೆ, ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ಬಳಿಕ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದನ್ನು ಖಂಡಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ವಿಪಕ್ಷಗಳು ಪ್ರತಿಭಟನೆ ನಡೆಸಿದವು.
ಸತತ ಎರಡನೇ ದಿನವೂ ಬ್ಯಾನರ್‌ಗಳನ್ನು ಪ್ರದರ್ಶಿಸಿದ ವಿಪಕ್ಷ ಸದಸ್ಯರು, “ಅಮಿತ್ ಶಾ ಸಂಸತ್ತಿನಲ್ಲಿ ಏಕೆ ಕಾಣಿಸುತ್ತಿಲ್ಲ?” ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿ, ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮದ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಈ ವಿಷಯದ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಕ್ಕೂ ಮತ್ತೆ ಅಡ್ಡಿಯಾಯಿತು.





