06 August 2026 |

ಬಿಸಿರೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ

  • 01 Aug 2026 10:38:02 AM

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸವಾಲಿನದ್ದಾಗಿದ್ದು, ಶನಿವಾರ ಬಿಸಿರೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ.

 

ತುಂಬೆ ನಿವಾಸಿ ಪ್ರವೀಣ್ ಅವರು ಚಲಾಯಿಸುತ್ತಿದ್ದ ಕಾರು ರಾಮಲ್ ಕಟ್ಟೆ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಉರುಳಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

 

ಮತ್ತೊಂದು ಘಟನೆಯಲ್ಲಿ, ಬಿಸಿರೋಡು-ಉಳ್ಳಾಲ ರಸ್ತೆಯ ಸಜೀಪ ನಡು ಸಮೀಪದ ದೇರಾಜೆ ಬಳಿ ಲಾರಿಯೊಂದು ರಸ್ತೆ ಬದಿಗೆ ಜಾರಿ ವಾಲಿ ನಿಂತಿದೆ. ಈ ಘಟನೆಯಲ್ಲೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

 

ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ಶ್ರೀ ದುರ್ಗಾರಾಜರಾಜೇಶ್ವರಿ ಕ್ರೇನ್ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿ ಸ್ಥಳವನ್ನು ತೆರವುಗೊಳಿಸಿದ್ದು, ಬಳಿಕ ವಾಹನ ಸಂಚಾರವನ್ನು ಎಂದಿನಂತೆ ಪುನಃ ಆರಂಭಿಸಲಾಯಿತು.

 

ಭಾರಿ ಮಳೆಯಿಂದ ರಸ್ತೆಗಳು ಜಾರುವ ಸ್ಥಿತಿಯಲ್ಲಿರುವ ಕಾರಣ ಇಂತಹ ಅಪಘಾತಗಳ ಸಾಧ್ಯತೆ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ವಾಹನ ಸವಾರರು ವೇಗ ನಿಯಂತ್ರಿಸಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.