06 August 2026 |

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹200ಕ್ಕೂ ಅಧಿಕ ಇಳಿಕೆ; ವ್ಯಾಪಾರಿಗಳಿಗೆ ನೆಮ್ಮದಿ

  • 01 Aug 2026 11:04:47 AM

ದೆಹಲಿ: 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಸುವ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಂತಸದ ಸುದ್ದಿ ಸಿಕ್ಕಿದೆ. ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಗಮನಾರ್ಹವಾಗಿ ಕಡಿತಗೊಳಿಸಲಾಗಿದ್ದು, ಇದರ ಪ್ರಯೋಜನ ಹೋಟೆಲ್, ಉಪಹಾರ ಗೃಹ ಹಾಗೂ ಇತರೆ ವಾಣಿಜ್ಯ ಬಳಕೆದಾರರಿಗೆ ದೊರೆಯಲಿದೆ.

 

ಸಾಗಣೆ ವೆಚ್ಚ ಹಾಗೂ ಸ್ಥಳೀಯ ತೆರಿಗೆಗಳ ವ್ಯತ್ಯಾಸದ ಕಾರಣ ವಿವಿಧ ನಗರಗಳಲ್ಲಿ ದರ ಇಳಿಕೆಯ ಪ್ರಮಾಣವೂ ಬದಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹202 ಇಳಿಕೆ ಮಾಡಲಾಗಿದೆ. ಅದೇ ವೇಳೆ ಕರ್ನಾಟಕದಲ್ಲಿ ₹209 ಕಡಿತವಾಗಿದ್ದು, ಪರಿಷ್ಕೃತ ದರದಂತೆ ಒಂದು ಸಿಲಿಂಡರ್ ಬೆಲೆ ₹2,872.50 ಆಗಿದೆ.

 

ಇದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸತತ ಎರಡನೇ ಬಾರಿ ಮಾಡಲಾದ ಇಳಿಕೆಯಾಗಿದೆ. ಇದಕ್ಕೂ ಮುನ್ನ ಜುಲೈ 1ರಂದು ತೈಲ ಮಾರುಕಟ್ಟೆ ಕಂಪನಿಗಳು ₹183.50 ಕಡಿತಗೊಳಿಸಿದ್ದವು. ಇದೀಗ ಮತ್ತೊಮ್ಮೆ ದರ ಇಳಿಕೆ ಮಾಡಿರುವುದು ವ್ಯಾಪಾರ ವಲಯಕ್ಕೆ ಮತ್ತಷ್ಟು ಅನುಕೂಲವಾಗಿದೆ.

 

ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ.

 

ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ, ಎರಡು ದಿನಗಳಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ನಡೆದಿರುವುದು ಗಮನಾರ್ಹವಾಗಿದೆ.