22 September 2026 |

ಅಕ್ರಮ ಗನ್ ಡೀಲಿಂಗ್ ಜಾಲ ಪತ್ತೆ; 7 ಮಂದಿ ಬಂಧನ

  • 22 Sep 2026 12:39:21 PM

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಗನ್‌ಗಳ ಮಾರಾಟ ಹಾಗೂ ವಹಿವಾಟು ನಡೆಸುತ್ತಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡದಿಂದ ನಡೆದಿದ್ದು, ಪ್ರಕರಣದ ವಿವರಗಳು ತಡವಾಗಿ ಬೆಳಕಿಗೆ ಬಂದಿವೆ.

 

ಬಂಧಿತರನ್ನು ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಆರು ಮಂದಿ ರೌಡಿ ಶೀಟರ್‌ಗಳು ಎಂದು ಪೊಲೀಸರು ತಿಳಿಸಿದ್ದಾರೆ.

 

ಆರೋಪಿಗಳಿಂದ ಐದು ಕಂಟ್ರಿ ಮೇಡ್ ಪಿಸ್ತೂಲ್‌ಗಳು ಹಾಗೂ 10 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮ ಗನ್ ವಹಿವಾಟಿನ ಹಿಂದೆ ಕೆಲ ಪ್ರಭಾವಿ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕ ಇರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ತನಿಖೆ ಮುಂದುವರಿದಂತೆ ಎರಡು ಕಂಟ್ರಿ ಮೇಡ್ ಪಿಸ್ತೂಲ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕೆಜಿ ಹಳ್ಳಿಯ ರೌಡಿ ಶೀಟರ್ ಕುಳ್ಳ ರಿಜ್ವಾನ್ ಮತ್ತು ರೌಡಿ ಶೀಟರ್ ಮನೋಜ್ ಅಲಿಯಾಸ್ ಜಾಕಿಗೆ ತಲಾ ಒಂದು ಪಿಸ್ತೂಲ್ ಮಾರಾಟ ಮಾಡಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಬಳಿಕ ಆರೋಪಿಗಳ ಬಳಿಯಿದ್ದ ಆ ಶಸ್ತ್ರಾಸ್ತ್ರಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಏಳು ಮಂದಿಯನ್ನು ಬಂಧಿಸಲಾಗಿದ್ದು, ಗನ್‌ಗಳನ್ನು ಪೂರೈಸುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ತನಿಖೆ ಮತ್ತಷ್ಟು ಮುಂದುವರಿದಿದ್ದು, ಅಕ್ರಮ ಶಸ್ತ್ರಾಸ್ತ್ರ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.