ಪತ್ನಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಮತ್ತು ಕಿರಿಯ ಮಗಳು ತನ್ನ ಮಗು ಅಲ್ಲ ಎಂಬ ಶಂಕೆಯಿಂದ ಪತ್ನಿ ಮತ್ತು ಏಳು ತಿಂಗಳ ಮಗಳನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ.
ಬಳ್ಳಾರಿ ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಂದ್ರಾಳ್ ಗ್ರಾಮದಲ್ಲಿ ಗುರುವಾರ ರಾತ್ರಿ ಆಂದ್ರಾಳ್ ಗ್ರಾಮದ ನಿವಾಸಿ ಹೊನ್ನೂರಪ್ಪ (28) ಎಂಬಾತ ತನ್ನ ಪತ್ನಿ ರಾಜೇಶ್ವರಿ (24) ಹಾಗೂ 7 ತಿಂಗಳ ಮಗಳು ಆಶ್ವಿನಿಯನ್ನು ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, ಮೃತೆಯ ಸಹೋದರ ಸುರೇಶ್ ನೀಡಿದ ದೂರಿನ ಮೇರೆಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಶೀಲದ ಬಗ್ಗೆ ಹಾಗೂ ಕಿರಿಯ ಮಗಳು ತನಗೆ ಸೇರಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ಹೊನ್ನೂರಪ್ಪ ಮತ್ತು ರಾಜೇಶ್ವರಿ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಸುತ್ತಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಆರೋಪಿಗೆ ತ್ವರಿತ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.





