21 September 2026 |

ಮೂಡುಬಿದಿರೆ: ಅಕ್ಕನೊಂದಿಗೆ ವೀಡಿಯೊ ಕರೆ ವೇಳೆ ಮಾತನಾಡುತ್ತಿದ್ದ ಯುವಕ ಆತ್ಮಹತ್ಯೆ

  • 01 Aug 2026 01:53:41 PM

ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಣಿಲ್ ಪ್ರದೇಶದಲ್ಲಿ ಯುವಕನೊಬ್ಬ ತನ್ನ ಅಕ್ಕನೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡುತ್ತಿದ್ದ ಸಂದರ್ಭವೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕಾಜೂರು ನಿವಾಸಿ ಅಬುಸಾಲಿ ಇಸ್ಮಾಯಿಲ್ ಅವರ ಪುತ್ರ ಸಯ್ಯದ್ ಅನ್ವರ್ (25) ಎಂದು ಗುರುತಿಸಲಾಗಿದೆ.

 

ಸಯ್ಯದ್ ಅನ್ವರ್ ಕಳೆದ ಕೆಲವು ತಿಂಗಳುಗಳಿಂದ ಬೆಳುವಾಯಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸಿಸುತ್ತಿದ್ದರು. ಪತಿ-ಪತ್ನಿ ನಡುವೆ ಆಗಾಗ ಭಿನ್ನಾಭಿಪ್ರಾಯ ಮತ್ತು ಕಲಹ ಉಂಟಾಗುತ್ತಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು ಎಂದು ತಿಳಿದುಬಂದಿದೆ.

 

ಮೀನಿನ ಟೆಂಪೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅನ್ವರ್, ಇತ್ತೀಚಿನ ದಿನಗಳಲ್ಲಿ ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ವಾಪಸ್ಸಾಗಿದ್ದರು. ಗುರುವಾರವೂ ಪತಿ-ಪತ್ನಿ ನಡುವೆ ಮತ್ತೆ ಜಗಳ ನಡೆದಿದ್ದು, ಬಳಿಕ ಪತ್ನಿ ತನ್ನ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

 

ಇದಾದ ಬಳಿಕ ಅನ್ವರ್ ತನ್ನ ಅಕ್ಕನಿಗೆ ವೀಡಿಯೊ ಕರೆ ಮಾಡಿ, ಪತ್ನಿಯ ಮನೆಯವರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬದವರು ತಕ್ಷಣ ಬಾಡಿಗೆ ಮನೆಗೆ ಧಾವಿಸಿದಾಗ, ಅವರು ಆಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

 

ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಹಾಗೂ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.