ಬಂಟ್ವಾಳ: ಯಕ್ಷಗಾನದ ಹಿರಿಯ ಸಂಘಟಕ ದಿ. ಬೋಳೂರು ದೋಗ್ರ ಪೂಜಾರಿ ಅವರ ಪುತ್ರ, ಖ್ಯಾತ ಸಾಹಿತಿ ದಿ. ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರ, ಖ್ಯಾತ ಯಕ್ಷಗಾನ ಪ್ರಸಂಗಕರ್ತ ಹಾಗೂ ಕಲಾವಿದ ಬೋಳೂರು ಮಧು ಕುಮಾರ್ (86) ನಿಧನರಾಗಿದ್ದಾರೆ. ಇಂದು ಸಂಜೆ ಬಂಟ್ವಾಳ ತಾಲೂಕಿನ ನರಿಕೊಂಬಿಯಲ್ಲಿರುವ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು.
ತುಳು ಹಾಗೂ ಕನ್ನಡ ಯಕ್ಷಗಾನ ಪ್ರಸಂಗಕರ್ತರಾಗಿ ಮಧು ಕುಮಾರ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ರಚನೆಯ ‘ಸುದರ್ಶನ ವಿಜಯ’ ಪ್ರಸಂಗ ಕಳೆದ ಐದು ದಶಕಗಳಿಂದ ವೃತ್ತಿಪರ ಯಕ್ಷಗಾನ ಮೇಳಗಳು ಹಾಗೂ ಹವ್ಯಾಸಿ ಕಲಾವಿದರ ವಲಯದಲ್ಲಿ ಜನಪ್ರಿಯತೆ ಉಳಿಸಿಕೊಂಡಿದೆ.
ಇದರೊಂದಿಗೆ ‘ಕಡುಗಲಿ ಕುಮಾರ ರಾಮ’, ‘ಏಕಾದಶಿ ದೇವಿ ಮಹಾತ್ಮ್ಯೆ’, ‘ಬಾಲೆ ನಾಗಮ್ಮ’, ‘ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ’ ಹಾಗೂ ತುಳು ‘ಕೋಟಿ ಚೆನ್ನಯ’ ಸೇರಿದಂತೆ ಹಲವು ಪ್ರಸಂಗಗಳನ್ನು ಅವರು ರಚಿಸಿದ್ದರು. ಈ ಪ್ರಸಂಗಗಳು ಯಕ್ಷಗಾನ ವಲಯದಲ್ಲಿ ನಿರಂತರವಾಗಿ ಪ್ರದರ್ಶನಗೊಳ್ಳುತ್ತಾ ಬಂದಿವೆ.
ಪ್ರಸಂಗಕರ್ತರಾಗಿ ಮಾತ್ರವಲ್ಲದೆ ಮಧು ಕುಮಾರ್ ಅವರು ಭಾಗವತರಾಗಿಯೂ ವಿವಿಧ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಯಕ್ಷಗಾನ ವೇಷಭೂಷಣ ವ್ಯವಸ್ಥೆಯಲ್ಲಿಯೂ ಅವರು ಪರಿಣತಿ ಹೊಂದಿದ್ದರು. ಸಂಘಟಕರಾಗಿ ಹಾಗೂ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕರಾವಳಿಯ ಯಕ್ಷಗಾನ ಪರಂಪರೆಯೊಂದಿಗೆ ಆಳವಾದ ನಂಟು ಹೊಂದಿದ್ದ ಮಧು ಕುಮಾರ್ ಅವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ನಷ್ಟವಾಗಿದೆ.
ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.





