ವಿಟ್ಲ: ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ತೀವ್ರವಾಗಿ ಹಾನಿಗೊಳಗಾಗಿದೆ. ಘಟನೆಯ ವೇಳೆ ಗೃಹಿಣಿಯ ಸಮಯಪ್ರಜ್ಞೆಯಿಂದ 9 ವರ್ಷದ ಬಾಲಕ ಸೇರಿದಂತೆ ಮೂವರು ಸುರಕ್ಷಿತವಾಗಿ ಹೊರಬಂದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಕುರುಂಬಳ ನಿವಾಸಿ ಇಸುಬು ಬ್ಯಾರಿ ಅವರ ಪುತ್ರ ಕೆ. ಹಮೀದ್ (49) ಅವರ ಮನೆಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಘಟನೆ ಸಂಭವಿಸಿದೆ. ಹಮೀದ್ ಅವರು ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ಪತ್ನಿ ಖೈರುನ್ನಿಸಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಖೈರುನ್ನಿಸಾ ತಕ್ಷಣ ಎಚ್ಚೆತ್ತುಕೊಂಡು ಮನೆಯಲ್ಲಿದ್ದ 9 ವರ್ಷದ ಪುತ್ರ ಇಮ್ರಾನ್ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ, ದೃಷ್ಟಿಹೀನರಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ಅತ್ತೆ ಮರಿಯಮ್ಮ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.
ಖೈರುನ್ನಿಸಾ ಅವರ ಕೂಗನ್ನು ಕೇಳಿದ ನೆರೆಮನೆಯ ನಿವಾಸಿ ಉಮ್ಮರ್ ಕೂಡಲೇ ಸ್ಥಳಕ್ಕೆ ಬಂದು ನೆರವಾಗಿದ್ದಾರೆ. ಅವರ ಸಹಾಯದಿಂದ ಮೂವರನ್ನೂ ಸುರಕ್ಷಿತವಾಗಿ ಅಂಗಳಕ್ಕೆ ಕರೆತರಲಾಗಿದೆ.
ಅವರು ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಬಹುತೇಕ ಭಾಗ ಹಾನಿಗೊಳಗಾಗಿದೆ.
ಘಟನೆಯ ಮಾಹಿತಿ ದೊರೆತ ಬಳಿಕ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.





