ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿ, ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಪದ್ಮಾವತಿ (29) ಎಂದು ಗುರುತಿಸಲಾಗಿದೆ. ಅವರ ಪತಿ ಸುಮಂತ್ ಜೈನ್ (32) ಆತ್ಮಹತ್ಯೆ ಮಾಡಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಸುಮಂತ್ ಸಿವಿಲ್ ಎಂಜಿನಿಯರ್ ಆಗಿದ್ದು, ಪದ್ಮಾವತಿ ವೈಟ್‌ಫೀಲ್ಡ್ ಸಮೀಪದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಮಾಹಿತಿಯ ಪ್ರಕಾರ, ಕಳೆದ ರಾತ್ರಿ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಮಾತಿನ ಚಕಮಕಿ ತೀವ್ರಗೊಂಡ ಸಂದರ್ಭದಲ್ಲಿ ಸುಮಂತ್ ಪತ್ನಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪದ್ಮಾವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಬಳಿಕ ಆತಂಕಗೊಂಡ ಸುಮಂತ್ ಮನೆಯ ಹಾಲ್‌ನಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಸುಮಂತ್ ತನ್ನ ತಾಯಿಗೆ ಧ್ವನಿ ಸಂದೇಶ ಕಳುಹಿಸಿದ್ದು, ತಾನು ಸಾಯುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ತನ್ನ ಪಿಎಫ್ ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಸಂದೇಶದಲ್ಲಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಈ ದಂಪತಿ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದರು. ಈ ವಿಚಾರವನ್ನು ಸ್ನೇಹಿತರೊಂದಿಗೂ ಹಂಚಿಕೊಂಡಿದ್ದರು ಎನ್ನಲಾಗಿದೆ.
ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಂಪತಿಯ ನಡುವಿನ ಕಲಹಕ್ಕೆ ಕಾರಣವೇನು ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.





