14 August 2026 |

ದೇಶದ ಭವಿಷ್ಯ ಯುವಜನರ ಕೈಯಲ್ಲಿ: ತಿರಂಗಾ ಜಾಥಾದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ

  • 14 Aug 2026 03:29:50 PM

ಬಂಟ್ವಾಳ: ಇಂದಿನ ಯುವಜನರೇ ಮುಂದಿನ ಭಾರತದ ದಿಕ್ಕನ್ನು ರೂಪಿಸುವ ಶಕ್ತಿ. ದೇಶದ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗಾಗಿ ಯುವಕರು ಜವಾಬ್ದಾರಿಯುತವಾಗಿ ಮುನ್ನಡೆಯಬೇಕು ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

 

ಬಂಟ್ವಾಳ ತಿರಂಗಾ ವಾಹನ ಜಾಥಾ ಸಮಿತಿಯ ವತಿಯಿಂದ ಗುರುವಾರ ಬಂಟ್ವಾಳದಲ್ಲಿ ತಿರಂಗಾ ವಾಹನ ಜಾಥಾ ಆಯೋಜಿಸಲಾಗಿತ್ತು. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮೈದಾನದಿಂದ ಜಾಥಾ ಆರಂಭವಾಯಿತು. ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರಧ್ವಜವನ್ನು ಹಸ್ತಾಂತರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ವಾಹನ ಜಾಥಾ ಬಿ.ಸಿ. ರೋಡ್‌ವರೆಗೆ ಸಾಗಿತು.

 

ಜಾಥಾದ ಸಂದರ್ಭದಲ್ಲಿ ಮಾತನಾಡಿದ ಅವರು, ಜೆನ್‌ ಜೀ ಪೀಳಿಗೆಯ ಯುವಕರು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಪಾತ್ರ ಹೊಂದಿದ್ದಾರೆ. ತಕ್ಷಣದ ಯಶಸ್ಸಿಗಾಗಿ ತಪ್ಪು ಮಾರ್ಗಗಳನ್ನು ಅನುಸರಿಸುವ ಬದಲು, ಪರಿಶ್ರಮ, ಶಿಸ್ತು ಮತ್ತು ರಾಷ್ಟ್ರದ ಮೇಲಿನ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

ದೇಶ ಮತ್ತು ಸಮಾಜದ ಹಿತಕ್ಕಾಗಿ ಧ್ವನಿ ಎತ್ತುವುದು ಹಾಗೂ ಪ್ರತಿಭಟಿಸುವುದು ನಾಗರಿಕರ ಹಕ್ಕಾಗಿದೆ. ಆದರೆ ಹೋರಾಟ ನಡೆಸುವಾಗ ಕಾನೂನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು ಎಂದು ಅವರು ತಿಳಿಸಿದರು.

 

ಭಾರತ ಸ್ವಾತಂತ್ರ್ಯ ಪಡೆದ ಐತಿಹಾಸಿಕ ಸಂದರ್ಭವನ್ನು ನೆನಪಿಸಿಕೊಳ್ಳುವ ಜೊತೆಗೆ, ದೇಶದ ಏಕತೆ ಮತ್ತು ಅಖಂಡತೆಯನ್ನು ಉಳಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ವಿಭಜನೆಯಿಂದ ಉಂಟಾದ ನೋವುಗಳನ್ನು ಮರೆಯದೆ, ಭವಿಷ್ಯದಲ್ಲಿ ರಾಷ್ಟ್ರದ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು.

 

ತಿರಂಗಾ ಕೇವಲ ರಾಷ್ಟ್ರಧ್ವಜವಲ್ಲ, ಅದು ಭಾರತದ ಗೌರವ, ಸ್ವಾಭಿಮಾನ ಮತ್ತು ಏಕತೆಯ ಪ್ರತೀಕವಾಗಿದೆ. ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕೆ ಗೌರವ ನೀಡಿ, ದೇಶದ ಏಕತೆ ಹಾಗೂ ಅಖಂಡತೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ಕರೆ ನೀಡಿದರು.