18 August 2026 |

ಹೋಟೆಲ್ ಆಹಾರ ಕಳಪೆಯೇ? QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು

  • 18 Aug 2026 01:44:00 PM

ಬೆಂಗಳೂರು: ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರದ ಹಲವು ಪ್ರಮುಖ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ದೂರು ಸ್ವೀಕರಿಸಲು ಹೋಟೆಲ್‌ಗಳಲ್ಲಿ QR ಕೋಡ್ ಅಳವಡಿಸುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

 

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇದುವರೆಗೆ 60ಕ್ಕೂ ಹೆಚ್ಚು 3-ಸ್ಟಾರ್ ಹಾಗೂ 5-ಸ್ಟಾರ್ ಹೋಟೆಲ್‌ಗಳು, 8 ಗೋಡೌನ್‌ಗಳು ಮತ್ತು 4 ಎಂಟರ್‌ಪ್ರೈಸ್ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ. ಆಹಾರ ಸುರಕ್ಷತಾ ನಿಯಮಗಳ ಪಾಲನೆ, ಆಹಾರ ಸಂಗ್ರಹಣೆಯ ವಿಧಾನ ಮತ್ತು ಆಹಾರದ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

 

ತಪಾಸಣೆ ವೇಳೆ ಅವಧಿ ಮೀರಿದ, ಸರಿಯಾದ ಲೇಬಲ್ ಇಲ್ಲದ ಹಾಗೂ ಅಸಮರ್ಪಕವಾಗಿ ಸಂಗ್ರಹಿಸಿದ್ದ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ನೂರಾರು ಕೆಜಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

ಇನ್ನು ಹೋಟೆಲ್‌ಗಳು, ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ QR ಕೋಡ್ ಅಳವಡಿಸಲಾಗುತ್ತದೆ. ಗ್ರಾಹಕರು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಹಾರದ ಗುಣಮಟ್ಟ, ಸೇವೆ ಅಥವಾ ಇತರ ಸಮಸ್ಯೆಗಳ ಬಗ್ಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.

 

ಆದರೆ ಸರ್ಕಾರದ ಈ ನಿರ್ಧಾರಕ್ಕೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿದೆ. QR ಕೋಡ್ ಅಳವಡಿಸುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಸಂಘಟನೆ ಮನವಿ ಮಾಡಲು ಮುಂದಾಗಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.

 

ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವುಗಳ ಹೆಸರುಗಳನ್ನು ಬಹಿರಂಗಪಡಿಸುವ ವಿಚಾರದಲ್ಲಿಯೂ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.