ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ದಿನಸಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟುಹೋಗಿದೆ.
ಬೆಂದ್ರಾಳ ನಿವಾಸಿ ಶರೀಫ್ ಅವರಿಗೆ ಸೇರಿದ ಅಂಗಡಿಯಲ್ಲಿ ರಾತ್ರಿ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಅಂಗಡಿ ಹಾಗೂ ಕಟ್ಟಡದ ಇತರ ಭಾಗಗಳಿಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಸ್ಥಳೀಯರ ಸಮಯೋಚಿತ ಪ್ರಯತ್ನದಿಂದ ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ಹರಡುವುದನ್ನು ತಡೆಯಲು ಸಾಧ್ಯವಾಗಿದೆ. ಆದರೆ, ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳು, ಕಟ್ಟಡದ ಭಾಗಗಳು ಹಾಗೂ ಸುಮಾರು ₹1 ಲಕ್ಷ ನಗದು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ತಿಳಿಸಲಾಗಿದೆ. ಘಟನೆಯಿಂದ ₹5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.





