29 August 2026 |

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸರ್ಕಾರಿ ರಜೆ ಘೋಷಿಸಲು ಶಾಸಕ ಅಶೋಕ್ ರೈ ಮನವಿ

  • 29 Aug 2026 09:54:44 AM

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

 

ಗುರುವಾರ ಮುಖ್ಯಮಂತ್ರಿಯನ್ನು ಭೇಟಿಯಾದ ಅಶೋಕ್ ರೈ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜನ್ಮಾಷ್ಟಮಿ ಸಂದರ್ಭದಲ್ಲಿ ಮೊಸರು ಕುಡಿಕೆ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಅವರು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದಾರೆ.

 

ಜನ್ಮಾಷ್ಟಮಿ ದಿನ ಸರ್ಕಾರಿ ರಜೆ ನೀಡಿದರೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಕೂಡಾ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಲಿದೆ. ಹೀಗಾಗಿ ಈ ದಿನದ ಮಹತ್ವವನ್ನು ಪರಿಗಣಿಸಿ ಸರ್ಕಾರಿ ರಜೆ ಘೋಷಿಸುವಂತೆ ಶಾಸಕ ಅಶೋಕ್ ರೈ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

 

ಯಾದವ ಸಭಾ ಸಮಿತಿಯಿಂದಲೂ ಮನವಿ

ಪುತ್ತೂರು ತಾಲೂಕು ಯಾದವ ಸಭಾ ಸಮಿತಿಯು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಸಾರ್ವಜನಿಕ ರಜೆ ಘೋಷಿಸುವಂತೆ ಈ ಹಿಂದೆ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿತ್ತು. ಸಮಿತಿಯ ಮನವಿಯನ್ನು ಪರಿಗಣಿಸಿ ಇದೀಗ ಶಾಸಕರು ಮುಖ್ಯಮಂತ್ರಿಯವರ ಬಳಿ ರಜೆ ಘೋಷಣೆಗೆ ಮನವಿ ಮಾಡಿದ್ದಾರೆ.