ಕೋಝಿಕ್ಕೋಡ್: ಕೇರಳದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ದೇಹದಲ್ಲಿ ಸೂಜಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಕೋಝಿಕ್ಕೋಡ್ ಜಿಲ್ಲೆಯ ಚಾತಮಂಗಲಂ ನಿವಾಸಿಗಳಾದ ವಿನೀಶ್ ಹಾಗೂ ಅಂಜು ದಂಪತಿಯ ಪುತ್ರಿಯನ್ನು 2025ರ ಜೂನ್‌ನಲ್ಲಿ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
NICUಯಿಂದ ಮಗುವನ್ನು ಮನೆಗೆ ಕರೆದುಕೊಂಡು ಬಂದ ಬಳಿಕ ಬಲಭಾಗದ ಪಕ್ಕೆಲುಬಿನ ಬಳಿ ಊತ ಕಂಡುಬಂದಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ, ಅದು ಸಾಮಾನ್ಯವಾದ ಬೆಳವಣಿಗೆ ಇರಬಹುದು ಎಂದು ತಿಳಿಸಲಾಗಿತ್ತು ಎನ್ನಲಾಗಿದೆ.
ಆದರೆ ಮಗು ಮುಂದುವರಿದಂತೆ ನೋವು ಅನುಭವಿಸುತ್ತಿದ್ದು, ಆಗಾಗ್ಗೆ ಅಳುತ್ತಿತ್ತು ಎಂದು ಕುಟುಂಬದವರು ಹೇಳಿದ್ದಾರೆ. 2026ರ ಜುಲೈನಲ್ಲಿ ಬಲಭಾಗದ ಪಕ್ಕೆಲುಬಿನ ಬಳಿ ಮತ್ತೆ ತೀವ್ರ ನೋವು ಮತ್ತು ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪರಿಶೀಲನೆ ನಡೆಸಿದಾಗ ಮಗುವಿನ ಬಲ ಪಕ್ಕೆಲುಬಿನ ಸಮೀಪ ಸೂಜಿ ಸಿಲುಕಿರುವುದು ಪತ್ತೆಯಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಸೂಜಿಯನ್ನು ಹೊರತೆಗೆಯಲಾಗಿದೆ. ಸೂಜಿ ದೇಹದಲ್ಲಿ ಸಾಕಷ್ಟು ಸಮಯದಿಂದ ಇದ್ದಂತೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಮಗು ಮಧ್ಯಂತರ ಅವಧಿಯಲ್ಲಿ ಬೇರೆ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ದೀರ್ಘಾವಧಿಯ ಆಸ್ಪತ್ರೆ ದಾಖಲಾತಿಗೆ ಒಳಗಾಗಿರಲಿಲ್ಲ ಎಂದು ಕುಟುಂಬ ಹೇಳಿದ್ದು, ಸೂಜಿ NICU ಚಿಕಿತ್ಸೆಯ ವೇಳೆ ದೇಹದೊಳಗೆ ಉಳಿದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದೆ.
ಈ ಕುರಿತು ಕುಟುಂಬವು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದೆ. ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಘಟನೆ ನಡೆದ ಸಂದರ್ಭದಲ್ಲಿ NICUನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ಚಿಕಿತ್ಸೆಯ ಸಂದರ್ಭ ಏನಾಯಿತು ಎಂಬುದನ್ನು ಪರಿಶೀಲಿಸಲಾಗುತ್ತಿದೆ.





