ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ರಥಾರೋಹಣ ಸಂದರ್ಭದಲ್ಲಿ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀಕೃಷ್ಣನ ಮಣ್ಣಿನ ಉತ್ಸವ ಮೂರ್ತಿ ಕೆಳಗೆ ಬಿದ್ದು ಭಗ್ನವಾಗಿದೆ.
ಚಾತುರ್ಮಾಸದ ಹಿನ್ನೆಲೆಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಈ ಘಟನೆ ಸಂಭವಿಸಿದೆ. ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರ ಕೈಯಿಂದ ಮೂರ್ತಿ ಜಾರಿ ಕೆಳಗೆ ಬಿದ್ದಿದೆ ಎನ್ನಲಾಗುತ್ತಿದೆ.
ಘಟನೆಯಿಂದ ಸ್ಥಳದಲ್ಲಿದ್ದ ಭಕ್ತರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಮುಂದುವರಿದವು.
ನಿನ್ನೆ ನಡೆದ ವಿಟ್ಲಪಿಂಡಿ ಉತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದರು. ಶ್ರೀಕೃಷ್ಣ ಮಠದ ಸುತ್ತಮುತ್ತ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.
ಮಣ್ಣಿನಿಂದ ನಿರ್ಮಿಸಲಾಗಿದ್ದ ಉತ್ಸವ ಮೂರ್ತಿ ಕೆಳಗೆ ಬಿದ್ದು ಭಗ್ನವಾದ ಘಟನೆ ಇದೀಗ ಭಕ್ತರ ಗಮನ ಸೆಳೆದಿದೆ.





