ಗುರುವಾಯನಕೆರೆ: ಪುತ್ತೂರಿನಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಸೆಪ್ಟೆಂಬರ್ 7ರಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕುಲಾಲ ಮಂದಿರದ ಸಮೀಪ ನಡೆದಿದೆ.
ಮಾಹಿತಿ ಪ್ರಕಾರ, ಓವರ್‌ಟೇಕ್ ಮಾಡಲು ಮುಂದಾದ ವೇಳೆ ಬಸ್ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯಲ್ಲಿದ್ದ ಅಬ್ದುಲ್ ರಹ್ಮಾನ್ ಅವರ ಮನೆಯ ಆವರಣಕ್ಕೆ ನುಗ್ಗಿ ನಿಂತಿದೆ.
ಬಸ್‌ನಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಸ್ ಮನೆಯ ಅಂಗಳಕ್ಕೆ ನುಗ್ಗಿದ ಪರಿಣಾಮ ಕೆಲಕಾಲ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಗಂಭೀರ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯಿಂದ ಮನೆಯ ಅಂಗಳ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗೆ ಉಂಟಾದ ಹಾನಿಯ ನಿಖರ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.





