ಮಥುರಾ: ಅಯೋಧ್ಯೆಯನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲೇ ಮಥುರಾ ಮತ್ತು ವೃಂದಾವನವನ್ನು ವಿಶ್ವಮಟ್ಟದ ಆಧ್ಯಾತ್ಮಿಕ ಹಾಗೂ ಪ್ರವಾಸೋದ್ಯಮ ತಾಣಗಳಾಗಿ ರೂಪಿಸಲು ಉತ್ತರ ಪ್ರದೇಶ ಸರ್ಕಾರ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಟ್ಟು ₹1,051 ಕೋಟಿ ವೆಚ್ಚದ 229 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಸುಮಾರು ₹540 ಕೋಟಿ ಮೌಲ್ಯದ 62 ಯೋಜನೆಗಳು ಈಗಾಗಲೇ ಪೂರ್ಣಗೊಂಡಿದ್ದು, ಲೋಕಾರ್ಪಣೆ ಮಾಡಲಾಗಿದೆ. ಉಳಿದಂತೆ ₹437 ಕೋಟಿಗೂ ಅಧಿಕ ವೆಚ್ಚದ 167 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮಥುರಾ ಮತ್ತು ವೃಂದಾವನಕ್ಕೆ ಆಗಮಿಸುವ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಮಥುರಾ 2.0’ ಅಭಿವೃದ್ಧಿ ಯೋಜನೆಯಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಸೇರಿಸಲಾಗಿದೆ.
ಯಾತ್ರಾರ್ಥಿಗಳ ಸಂಚಾರಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಮನಾ ಎಕ್ಸ್‌ಪ್ರೆಸ್‌ವೇಯಿಂದ ವೃಂದಾವನಕ್ಕೆ ನೇರ ಸಂಪರ್ಕ ನೀಡುವ ₹251 ಕೋಟಿ ವೆಚ್ಚದ ನಾಲ್ಕು ಪಥಗಳ ಸುಧಾರಿತ ಹೆದ್ದಾರಿ ನಿರ್ಮಿಸಲಾಗಿದೆ. ಇದರಿಂದ ಕಿರಿದಾದ ರಸ್ತೆಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ₹47 ಕೋಟಿ ವೆಚ್ಚದಲ್ಲಿ ಹಾಸ್ಟೆಲ್‌ಗಳ ನಿರ್ಮಾಣಕ್ಕೂ ಸರ್ಕಾರ ಯೋಜನೆ ರೂಪಿಸಿದೆ. ಮಥುರಾ-ವೃಂದಾವನ ಪ್ರದೇಶದ ಧಾರ್ಮಿಕ ಮಹತ್ವವನ್ನು ಉಳಿಸಿಕೊಂಡು ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.





