ಉಡುಪಿ: ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಆರೈಕೆಗೆ ನೆರವಾಗುವ ಉದ್ದೇಶದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಒಂದು ವರ್ಷದಿಂದ ಹಣ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
2025ರ ಸೆಪ್ಟೆಂಬರ್‌ನಿಂದ ಈವರೆಗೆ ಅರ್ಜಿ ಸಲ್ಲಿಸಿರುವ ಹಲವು ಗರ್ಭಿಣಿಯರು ಹಾಗೂ ಬಾಣಂತಿಯರು ಇನ್ನೂ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಫಲಾನುಭವಿಗಳ ಮಾಹಿತಿಯನ್ನು ತಾಯಿಕಾರ್ಡ್ ಆಧರಿಸಿ ಸಂಗ್ರಹಿಸಿ ಸಲ್ಲಿಸುತ್ತಾರೆ. ಈ ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ಪರಿಶೀಲಿಸಿದ ಬಳಿಕ ರಾಜ್ಯ ಕಚೇರಿಗೆ ಕಳುಹಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಮಾಹಿತಿ ದಾಖಲು, ಖಾತೆಗೆ ಹಣವಿಲ್ಲ
ಯೋಜನೆಯಡಿ ಗರ್ಭಿಣಿಯರ ನೋಂದಣಿ, ಆರೋಗ್ಯ ತಪಾಸಣೆ, ಹೆರಿಗೆ ಮತ್ತು ಮಗುವಿನ ಲಸಿಕೆ ಸೇರಿದಂತೆ ಅಗತ್ಯ ವಿವರಗಳನ್ನು ಅಂಗನವಾಡಿ ಕಾರ್ಯಕರ್ತೆಯರು ದಾಖಲಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ದಾಖಲೆಗಳು ಸರಿಯಾಗಿದ್ದರೂ, ಅರ್ಹತಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಹಣ ಜಮೆಯಾಗಿಲ್ಲ ಎಂದು ಫಲಾನುಭವಿಗಳು ತಿಳಿಸಿದ್ದಾರೆ.
ಹಣ ಪಾವತಿಯಾಗದಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಒತ್ತಡ ಉಂಟಾಗಿದೆ. ಗರ್ಭಧಾರಣೆ ಮತ್ತು ಹೆರಿಗೆಯ ಅವಧಿಯಲ್ಲಿ ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಯೋಜನೆಯ ನೆರವು ನಿರೀಕ್ಷಿಸಿದ್ದ ಕುಟುಂಬಗಳು ಇದೀಗ ತೊಂದರೆ ಎದುರಿಸುತ್ತಿವೆ.
ಕೇಂದ್ರ–ರಾಜ್ಯ ಸಹಭಾಗಿತ್ವದ ಯೋಜನೆ
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಮಿಷನ್ ಶಕ್ತಿ ಯೋಜನೆಯ ‘ಸಾಮರ್ಥ್ಯ’ ಉಪಯೋಜನೆಯಡಿ ಜಾರಿಯಲ್ಲಿದೆ. ಕೇಂದ್ರದ ಅಧಿಕೃತ ಪಿಎಂಎಂವಿವೈ ಪೋರ್ಟಲ್ ಪ್ರಕಾರ, 2026ರ ಜುಲೈ 31ರ ವೇಳೆಗೆ ದೇಶಾದ್ಯಂತ 4.37 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, ₹20,571 ಕೋಟಿ ಪಾವತಿಸಲಾಗಿದೆ.
ಕರ್ನಾಟಕದಲ್ಲಿ ರಾಜ್ಯದ ಪಾಲಿನ ಅನುದಾನವನ್ನು ಸೇರಿಸಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಅನುದಾನದ ಕೊರತೆಯಿಂದಾಗಿ ಫಲಾನುಭವಿಗಳಿಗೆ ಹಣ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಯೋಜನೆಯಡಿ ಅರ್ಹರಾಗಿರುವ ಎಲ್ಲ ಫಲಾನುಭವಿಗಳಿಗೆ ಬಾಕಿ ಹಣವನ್ನು ಶೀಘ್ರವಾಗಿ ಪಾವತಿಸಬೇಕು ಎಂಬುದು ಗರ್ಭಿಣಿಯರು ಹಾಗೂ ಬಾಣಂತಿಯರ ನಿರೀಕ್ಷೆಯಾಗಿದೆ.





