13 September 2026 |

ಮಂಗಳೂರು ಸಚಿವ ಸಂಪುಟ ಸಭೆ: ಸಿಎಂಗೆ ಬಿಜೆಪಿಯಿಂದ 44 ಬೇಡಿಕೆಗಳ ಪಟ್ಟಿ

  • 13 Sep 2026 11:51:44 AM

ಮಂಗಳೂರು: ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಜಿಲ್ಲೆಯ ಅಭಿವೃದ್ಧಿ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 44 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.

 

ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಜಿಲ್ಲೆಯ ಶಾಸಕರನ್ನೊಳಗೊಂಡ ನಿಯೋಗ ಭಾಗವಹಿಸಿತ್ತು. ಈ ವೇಳೆ ಜಿಲ್ಲೆಯ ಪ್ರಮುಖ ಸಮಸ್ಯೆಗಳು ಮತ್ತು ಅಗತ್ಯ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು.

 

ತುಳು ಭಾಷೆಗೆ ಎರಡನೇ ಭಾಷೆಯ ಮಾನ್ಯತೆ ನೀಡುವುದು, ಕರಾವಳಿ ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ವಿಶೇಷ ಕಾರ್ಯಪಡೆ ರಚಿಸುವುದು ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಟೆಂಪಲ್ ಟೂರಿಸಂಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಬಿಜೆಪಿ ಮನವಿ ಮಾಡಿದೆ.

 

ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಹೊರತುಪಡಿಸಿ ಝೀರೋ ಬಫರ್ ಝೋನ್ ಗಡಿ ಗುರುತಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಐಟಿ ಪಾರ್ಕ್ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.

 

ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಶೇಷ ಅನುದಾನ ನೀಡಬೇಕು. ಮಂಗಳೂರು ಅಳಿವೆ ಬಾಗಿಲು, ನೇತ್ರಾವತಿ ಹಾಗೂ ಗುರುಪುರ ನದಿಗಳಲ್ಲಿ ತುರ್ತು ಡ್ರೆಜ್ಜಿಂಗ್ ಕೈಗೊಳ್ಳಬೇಕು. ಕರಾವಳಿಯ ತುರ್ತು ಸೇವೆಗಾಗಿ ಸೀ ಆ್ಯಂಬುಲೆನ್ಸ್ ಆರಂಭಿಸುವಂತೆಯೂ ಒತ್ತಾಯಿಸಲಾಗಿದೆ.

 

ನಾಡದೋಣಿಗಳ ಎಂಜಿನ್ ಬಳಕೆಗೆ ಅಗತ್ಯವಿರುವ ಸೀಮೆಎಣ್ಣೆಯನ್ನು ಕಡಿಮೆ ದರದಲ್ಲಿ ಪೂರೈಸಬೇಕು. ಮೀನುಗಾರಿಕಾ ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ವಸತಿ ಇಲ್ಲದ ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿಶೇಷ ಅನುದಾನ ನೀಡಬೇಕು. ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಿಂಗಲ್ ಸೈಟ್ ನಿಯಮದಿಂದ ವಿನಾಯಿತಿ ನೀಡಿ, ಪಂಚಾಯಿತಿಯಿಂದ ಅಗತ್ಯ ಪರವಾನಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

 

ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಐಸಿಯು ಸಾಮರ್ಥ್ಯವನ್ನು 250 ಹಾಸಿಗೆಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಜಮೀನಿನಲ್ಲಿರುವ ದೈವ ಹಾಗೂ ದೇವಸ್ಥಾನಗಳ ಭೂಮಿಯನ್ನು ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಿ ದಾಖಲೆ ಒದಗಿಸಬೇಕು. ಮರಳು ಪರವಾನಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿ ದರ ಇಳಿಕೆ ಮಾಡಬೇಕು ಹಾಗೂ ಕೆಂಪುಕಲ್ಲು ಹಿಂದಿನ ದರದಲ್ಲೇ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳೂ ಇವೆ.

 

ಕೃಷಿ ಪ್ರದೇಶಗಳಲ್ಲಿ ಕಾಡಾನೆಗಳ ದಾಳಿ ನಿಯಂತ್ರಿಸಲು ಆನೆ ಕಂದಕ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು. ಎಲ್ಲ ತಾಲೂಕುಗಳಲ್ಲೂ ಕೈಗಾರಿಕಾ ವಲಯ ಸ್ಥಾಪನೆಗೆ ಕನಿಷ್ಠ 100 ಎಕರೆ ಸರ್ಕಾರಿ ಜಮೀನು ಕಾಯ್ದಿರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 

ಜಿಲ್ಲೆಯ ಹದಗೆಟ್ಟಿರುವ ರಸ್ತೆ, ಒಳಚರಂಡಿ, ಸೇತುವೆ ಮತ್ತು ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1,000 ಕೋಟಿ ವಿಶೇಷ ಅನುದಾನ ನೀಡಬೇಕು. ಹೊಸ ತಾಲೂಕುಗಳಲ್ಲಿ ಎಲ್ಲ ಸರ್ಕಾರಿ ಇಲಾಖೆಗಳು ಶಾಶ್ವತವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಡಿ.ಸಿ. ಮನ್ನಾ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕೃಷಿಗಾಗಿ ಮಂಜೂರು ಮಾಡಲು ಅವಕಾಶ ನೀಡಬೇಕು ಸೇರಿದಂತೆ ಒಟ್ಟು 44 ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಮುಂದಿಡಲಾಗಿದೆ.