ಬಂಟ್ವಾಳ: ಗ್ರಾಮೀಣ ಪ್ರದೇಶಗಳ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಶೌಚಾಲಯ ಗುಂಡಿಗಳಿಂದ ಹೊರಬರುವ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಉದ್ದೇಶದಿಂದ ಬಂಟ್ವಾಳ ತಾಲೂಕು ಪಂಚಾಯಿತಿ ಮಹತ್ವದ ಕ್ರಮ ಕೈಗೊಂಡಿದೆ.
ಗೋಳ್ತಮಜಲು ಗ್ರಾಮದ ಚಿಮಿಣಿಗುರಿಯಲ್ಲಿ ನಿರ್ಮಿಸಲಾಗಿರುವ ಬಹುಗ್ರಾಮ ಮಲ ತ್ಯಾಜ್ಯ ನಿರ್ವಹಣಾ ಘಟಕ ಇದೀಗ ಮತ್ತೆ ಕಾರ್ಯಾರಂಭಗೊಂಡಿದೆ. ಮುಂದಿನ ಹಂತದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ 51 ಗ್ರಾಮ ಪಂಚಾಯಿತಿಗಳಿಂದ ಸಂಗ್ರಹವಾಗುವ ಮಲ ತ್ಯಾಜ್ಯವನ್ನು ಈ ಘಟಕಕ್ಕೆ ತಂದು ಸಂಸ್ಕರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ₹64 ಲಕ್ಷ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿತ್ತು. 2023ರಲ್ಲಿ ಘಟಕವನ್ನು ಉದ್ಘಾಟಿಸಲಾಗಿದ್ದು, ವಾರಕ್ಕೆ ಸುಮಾರು 18 ಸಾವಿರ ಲೀಟರ್ ಮಲ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತ್ಯಾಜ್ಯವನ್ನು ಮಾತ್ರ ಘಟಕದಲ್ಲಿ ಸಂಸ್ಕರಿಸಲು ಯೋಜಿಸಲಾಗಿತ್ತು.
ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಲ ತ್ಯಾಜ್ಯ ಘಟಕಕ್ಕೆ ತಲುಪದ ಕಾರಣ ಕೆಲಕಾಲ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಎದುರಾಗಿದ್ದ ಸಮಸ್ಯೆಗಳನ್ನು ಪರಿಹರಿಸಿ ಘಟಕವನ್ನು ಪುನಃ ಚಾಲನೆಗೆ ತರಲಾಗಿದೆ. ತಾಲೂಕಿನ ಎಲ್ಲಾ 51 ಗ್ರಾಮ ಪಂಚಾಯಿತಿಗಳನ್ನು ಘಟಕದ ವ್ಯಾಪ್ತಿಗೆ ಒಳಪಡಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಶೌಚಾಲಯ ಗುಂಡಿಗಳು ತುಂಬಿದಾಗ ಅಲ್ಲಿಂದ ಮಲ ತ್ಯಾಜ್ಯವನ್ನು ತೆರವುಗೊಳಿಸಿ ಘಟಕಕ್ಕೆ ಸಾಗಿಸಲು ತಾಲೂಕು ಪಂಚಾಯಿತಿಯಿಂದ ಸಕ್ಕಿಂಗ್ ಯಂತ್ರದ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ದಿನಕ್ಕೆ ಸುಮಾರು 3 ಸಾವಿರ ಲೀಟರ್ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಸಾಮರ್ಥ್ಯದ ಯಂತ್ರ ಕಾರ್ಯನಿರ್ವಹಿಸುತ್ತಿದೆ.





