ಬೆಳ್ತಂಗಡಿ: ಬಿ.ಸಿ.ರೋಡ್–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ 39 ಎಕರೆ ಅರಣ್ಯ ಪ್ರದೇಶ ಬಳಕೆಯಾಗಲಿದೆ. ಈ ಪ್ರದೇಶದಲ್ಲಿರುವ ಸುಮಾರು 7,540 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಂದಾಜು ಪಟ್ಟಿ ಸಿದ್ಧಪಡಿಸಿರುವುದು ಪರಿಸರ ಹೋರಾಟಗಾರರ ವಿರೋಧಕ್ಕೆ ಕಾರಣವಾಗಿದೆ.
ಚಾರ್ಮಾಡಿ ಘಾಟ್‌ನ ಚಾರ್ಮಾಡಿಯಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದವರೆಗೆ ಸುಮಾರು 11 ಕಿ.ಮೀ. ಉದ್ದದ ರಸ್ತೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಸುಮಾರು ₹343.74 ಕೋಟಿ ವೆಚ್ಚದ ಈ ಯೋಜನೆಗೆ 2023–24ನೇ ಸಾಲಿನಲ್ಲಿ ಅನುಮೋದನೆ ದೊರೆತಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಯನ್ನು ಎಸ್‌ಎಲ್‌ವಿ ಅರ್ಥ್ ಮೂವರ್ಸ್ ಸಂಸ್ಥೆಗೆ ವಹಿಸಲಾಗಿದೆ.
ಯೋಜನೆ ಅನುಷ್ಠಾನಕ್ಕೆ ಸುಮಾರು 39 ಎಕರೆ ಅರಣ್ಯ ಭೂಮಿಯ ಅಗತ್ಯವಿದ್ದು, ಈ ವ್ಯಾಪ್ತಿಯಲ್ಲಿ ತೆರವುಗೊಳಿಸಬೇಕಾದ ಮರಗಳ ಗಣತಿಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದೆ. ಹೆದ್ದಾರಿ ಇಲಾಖೆ ಮರಗಳ ತೆರವಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಮರಗಳ ಸಂಖ್ಯೆ, ಅರಣ್ಯ ಭೂಮಿಯ ಬಳಕೆ ಹಾಗೂ ಬದಲಿ ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಚಾರ್ಮಾಡಿ ಘಾಟ್‌ನಲ್ಲಿ ಒಟ್ಟು 13 ಹೇರ್‌ಪಿನ್ ತಿರುವುಗಳಿದ್ದು, ಕೆಲವು ತಿರುವುಗಳನ್ನು ಸಾಧ್ಯವಾದಷ್ಟು ಸರಳಗೊಳಿಸುವುದರ ಜೊತೆಗೆ ರಸ್ತೆಯ ಅಗಲ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ಘಟ್ಟ ಪ್ರದೇಶದ ಸಂಚಾರ ಇನ್ನಷ್ಟು ಸುಗಮವಾಗುವುದರ ಜೊತೆಗೆ ಸುರಕ್ಷಿತ ಮತ್ತು ವೇಗದ ಸಂಪರ್ಕ ವ್ಯವಸ್ಥೆ ಕಲ್ಪಿಸುವ ನಿರೀಕ್ಷೆ ಇದೆ.
ಆದರೆ, ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮರಗಳ ತೆರವು ಹಾಗೂ ನಿರ್ಮಾಣ ಕಾಮಗಾರಿಯಿಂದ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಪರಿಸರ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಮರಗಳ ಕಡಿತದಿಂದ ವನ್ಯಜೀವಿಗಳ ವಾಸಸ್ಥಳಕ್ಕೆ ತೊಂದರೆಯಾಗಬಹುದು ಮತ್ತು ಘಟ್ಟ ಪ್ರದೇಶದಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಬಹುದು ಎಂಬುದು ಪರಿಸರ ಹೋರಾಟಗಾರರ ಪ್ರಮುಖ ಕಳವಳವಾಗಿದೆ.





