ನವದೆಹಲಿ: ಸೆಪ್ಟೆಂಬರ್ 28ರಿಂದ 30ರವರೆಗೆ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್ ನೌಕರರ ಮೂರು ದಿನಗಳ ಮುಷ್ಕರವನ್ನು ಮುಂದೂಡಲಾಗಿದೆ. ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ಸೆಪ್ಟೆಂಬರ್ 27ರ ರಾತ್ರಿ ನಡೆದ ಮಾತುಕತೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಯಾಗಿರುವ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಚರ್ಚಿಸಲು IBA ಮತ್ತು UFBU ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಉಳಿದ ಶನಿವಾರಗಳನ್ನು ರಜಾದಿನಗಳನ್ನಾಗಿ ಘೋಷಿಸುವ ಕುರಿತು ಈ ಸಮಿತಿ ಚರ್ಚೆ ನಡೆಸಲಿದೆ.
ಇದರೊಂದಿಗೆ ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ ಮುಷ್ಕರ ಸದ್ಯಕ್ಕೆ ನಡೆಯುವುದಿಲ್ಲ. ಹೀಗಾಗಿ ಗ್ರಾಹಕರ ಬ್ಯಾಂಕ್ ವ್ಯವಹಾರಗಳಿಗೆ ಮುಷ್ಕರದಿಂದ ಉಂಟಾಗಬಹುದಾಗಿದ್ದ ಅಡಚಣೆ ತಪ್ಪಿದೆ. ಇಂದು ಸೆಪ್ಟೆಂಬರ್ 28ರಂದು ಬ್ಯಾಂಕ್ ಶಾಖೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ.
ನೌಕರರ ಪಿಂಚಣಿ ಸೇರಿದಂತೆ ಇತರ ಬಾಕಿ ಬೇಡಿಕೆಗಳು ಹಾಗೂ ಹಿರಿಯ ಅಧಿಕಾರಿಗಳ Performance Linked Incentive (PLI) ಯೋಜನೆ ಕುರಿತ ವಿಚಾರಗಳನ್ನೂ ಮುಂದಿನ ಮಾತುಕತೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.
ಹಿಂದಿನ ಸಂಬಂಧಿತ ಸುದ್ದಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.27 ಭಾನುವಾರವೂ ಬ್ಯಾಂಕ್‌ಗಳು ಕಾರ್ಯನಿರ್ವಹಣೆ





