ಮಾಣಿ: ಫೈಓವರ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಡಿಕೇರಿ ನಿವಾಸಿ ನಫೀಸಾ (55) ಮೃತಪಟ್ಟವರು ಎಂದು ತಿಳಿದುಬಂದಿದೆ. ಅಪಘಾತದ ವೇಳೆ ಆಲ್ಟೊ ಕಾರಿನಲ್ಲಿ ಚಾಲಕ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ನಾಲ್ವರು ಮಹಿಳೆಯರು ಹಾಗೂ ಚಾಲಕ ಉಮ್ರಾ ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದ ಕುಟುಂಬದವರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಇನ್ನು ಮಾಣಿ ಬಳಿ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯ ವಿನ್ಯಾಸ ಹಾಗೂ ಪ್ರವೇಶ ಮಾರ್ಗದ ಕುರಿತು ಸ್ಥಳೀಯರು ಈ ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೊರಗಿನಿಂದ ಬರುವ ವಾಹನ ಸವಾರರಿಗೆ ಸರ್ವಿಸ್ ರಸ್ತೆ ಸ್ಪಷ್ಟವಾಗಿ ಕಾಣಿಸದೆ ಗೊಂದಲ ಉಂಟಾಗುತ್ತಿದೆ. ಕಿರಿದಾದ ಪ್ರವೇಶ ಮಾರ್ಗ ಮತ್ತು ಸಮರ್ಪಕ ಸೂಚನಾ ಫಲಕಗಳ ಕೊರತೆಯೂ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.





