ಬಂಟ್ವಾಳ: ಅಬ್ದುಲ್ ರೆಹಮಾನ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ನೋಟೀಸ್ ಕುರಿತು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ. ನನ್ನ ಮೇಲೆ 110 ಕೇಸ್‌ಗಳಿವೆ. ಇದ್ಯಾವ ಲೆಕ್ಕ?” ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ಹ*ತ್ಯೆ ಪ್ರಕರಣದ ಆರೋಪಿಗಳೊಂದಿಗೆ ತಾನು ಫೋನ್‌ನಲ್ಲಿ ಮಾತನಾಡಿರುವುದು ನಿಜ ಎಂದು ಒಪ್ಪಿಕೊಂಡಿರುವ ಅವರು, “ಸಂವಿಧಾನ ಕೊಟ್ಟ ಸ್ವಾತಂತ್ರ್ಯದ ಮೇಲೆ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಫೋನ್ ಮಾಡಿ ಮಾತನಾಡಿದ್ದು ಹೌದು. ಆದರೆ ನಾನೇನು ಕೊ*ಲೆ ಮಾಡಿ ಎಂದು ಮಾತನಾಡಿದ್ದೇನಾ?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ಫೋನ್ ಸಂಭಾಷಣೆಯ ರೆಕಾರ್ಡ್ ಪೊಲೀಸರ ಬಳಿ ಇದ್ದರೆ, ಅದರಲ್ಲಿ ಏನು ಮಾತನಾಡಲಾಗಿದೆ ಎಂಬುದು ಪೊಲೀಸರಿಗೆ ತಿಳಿದಿರಬೇಕು ಎಂದು ಅವರು ಹೇಳಿದ್ದಾರೆ.
“ನಾನು ಮಾತನಾಡಿದ ರೆಕಾರ್ಡ್ ಅವರಲ್ಲಿ ಇದೆ ಅಲ್ವಾ? ಅದರಲ್ಲೇ ಏನಿದೆ ಅಂತ ಗೊತ್ತಿಲ್ವಾ?” ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟೀಸ್ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದು, “ನಾನು ಯಾಕೆ ವಿಚಾರಣೆಗೆ ಹಾಜರಾಗಬೇಕು? ನನಗೆ ಸಮಯ ಕೊಡಲು ಅವರ್ಯಾರು?” ಎಂದು ಹೇಳಿದ್ದಾರೆ.
ಅಬ್ದುಲ್ ರೆಹಮಾನ್ ಹ*ತ್ಯೆಯನ್ನು ತಾವು ಯಾವುದೇ ರೀತಿಯಲ್ಲೂ ಪ್ರತಿಪಾದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಕರಣದಲ್ಲಿ ಸಂಬಂಧವಿಲ್ಲದವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
“ನಾವ್ಯಾರು ಆ ಹ*ತ್ಯೆಯ ಪ್ರತಿಪಾದನೆ ಮಾಡಲ್ಲ. ಆದರೆ ಅದರಲ್ಲಿ ಇಲ್ಲದವರ ಮೇಲೆ ಕೇಸ್ ಹಾಕಿದ್ರು,”ಎಂದು ಅವರು ಹೇಳಿದ್ದಾರೆ.
ಕಾನೂನು ಪ್ರಕ್ರಿಯೆಯ ಬದಲಿಗೆ ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ತಮ್ಮ ಮೇಲೆ ಒತ್ತಡ ಹೇರಬಾರದು ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಸರ್ಕಾರದ ನಾಯಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಈ ನಡುವೆ, ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪೊಲೀಸರು ನೋಟೀಸ್ ನೀಡಿರುವುದು ವರದಿಯಾಗಿದೆ. ಹತ್ಯೆಯ ಸಂದರ್ಭದಲ್ಲಿ ಪ್ರಕರಣದ ಆರೋಪಿಗಳೊಂದಿಗೆ ಅವರು ಫೋನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನೋಟೀಸ್ ನೀಡಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ಆದರೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರ ಪ್ರಕಾರ, ಪ್ರಕರಣದಲ್ಲಿ ಪ್ರಭಾಕರ್ ಭಟ್ ಅವರ ಹೇಳಿಕೆ ದಾಖಲಿಸಲು ಬಾಕಿಯಿದ್ದು, ಸಾಕ್ಷಿದಾರರಾಗಿ ಅವರ ಹೇಳಿಕೆ ಪಡೆಯುವ ಉದ್ದೇಶದಿಂದ ನೋಟೀಸ್ ನೀಡಲಾಗಿದೆ. ಹೇಳಿಕೆ ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.





