30 September 2026 |

ಎಟಿಎಂ ದರೋಡೆಗೆ ಯತ್ನ: ₹16 ಲಕ್ಷ ಉಳಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್; ಕಳ್ಳರು ಬೂತ್‌ನೊಳಗೇ ಬಂಧನ!

  • 29 Sep 2026 03:14:24 PM

ಜೈಪುರ: ಮಧ್ಯರಾತ್ರಿ ಎಟಿಎಂ ಒಡೆದು ಹಣ ದೋಚಲು ಮುಂದಾದ ಇಬ್ಬರು ಕಳ್ಳರ ಪ್ರಯತ್ನವನ್ನು ಮಹಿಳಾ ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ವಿಫಲಗೊಳಿಸಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಎಟಿಎಂ ಬೂತ್‌ಗೆ ಹೊರಗಿನಿಂದ ಶಟರ್ ಹಾಕಿ ಕಳ್ಳರನ್ನು ಒಳಗೇ ಸಿಲುಕಿಸಿದ ಮ್ಯಾನೇಜರ್, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಈ ಕಾರ್ಯಾಚರಣೆಯಿಂದ ಎಟಿಎಂನಲ್ಲಿದ್ದ ₹16,00,900 ನಗದು ಹಣ ಸುರಕ್ಷಿತವಾಗಿದ್ದು, ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿದ್ದಾರೆ.

 

ನಾಗೌರ್ ಜಿಲ್ಲೆಯ ಯುಸಿಒ ಬ್ಯಾಂಕ್ ಎಟಿಎಂನಲ್ಲಿ ಸೋಮವಾರ ತಡರಾತ್ರಿ ಸುಮಾರು 2:13ರ ವೇಳೆಗೆ ಈ ಘಟನೆ ನಡೆದಿದೆ. ಮುಂಡ್ವಾ ನಿವಾಸಿ ಭರತ್ ಪ್ರಜಾಪತ್ ಹಾಗೂ ಬಿಹಾರ ಮೂಲದ ಕೋಮಲ್ ಕುಮಾರ್ ಬೈಕ್‌ನಲ್ಲಿ ಬಂದು ಎಟಿಎಂ ದೋಚಲು ಪ್ರಯತ್ನಿಸಿದ್ದರು.

 

ಅನುಮಾನಾಸ್ಪದ ಚಟುವಟಿಕೆ ಪತ್ತೆಹಚ್ಚಿದ ಭದ್ರತಾ ವ್ಯವಸ್ಥೆ

ಎಟಿಎಂ ಒಳಗೆ ಪ್ರವೇಶಿಸಿದ ಆರೋಪಿಗಳು ಮೊದಲು ಸಿಸಿಟಿವಿ ಕ್ಯಾಮೆರಾಗೆ ಗ್ರೀಸ್ ಹಚ್ಚಿ ಅದರ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಬಳಿಕ ಕೆಲವು ವೈರ್‌ಗಳನ್ನು ಕತ್ತರಿಸಿ ಎಟಿಎಂ ಯಂತ್ರವನ್ನು ಒಡೆಯಲು ಮುಂದಾಗಿದ್ದಾರೆ. ಈ ವೇಳೆ ಬ್ಯಾಂಕ್‌ನ ಇ-ಸರ್ವೆಲೆನ್ಸ್ ವ್ಯವಸ್ಥೆಯು ಅಸಹಜ ಚಟುವಟಿಕೆಯನ್ನು ಗುರುತಿಸಿ ಅಲಾರಂ ನೀಡಿದೆ.

 

ತಕ್ಷಣವೇ ಅಜೇರ್ ವಲಯದ ಭದ್ರತಾ ಅಧಿಕಾರಿ ಗೌತಮ್ ಅವರು ಬ್ಯಾಂಕ್ ಮ್ಯಾನೇಜರ್ ಸರಿತಾ ಚೌಧರಿ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

 

ಪತಿಯೊಂದಿಗೆ ಸ್ಥಳಕ್ಕೆ ಬಂದ ಮ್ಯಾನೇಜರ್

ಬ್ಯಾಂಕ್‌ನ ಮೇಲ್ಭಾಗದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಸರಿತಾ ಚೌಧರಿ ಅವರು ಯಾವುದೇ ವಿಳಂಬ ಮಾಡದೆ ಪತಿಯೊಂದಿಗೆ ಎಟಿಎಂ ಬಳಿ ಬಂದಿದ್ದಾರೆ. ಬೂತ್‌ನೊಳಗೆ ಇಬ್ಬರು ವ್ಯಕ್ತಿಗಳು ಎಟಿಎಂ ಯಂತ್ರವನ್ನು ಒಡೆಯುತ್ತಿರುವುದನ್ನು ಕಂಡ ಅವರು, ಧೈರ್ಯದಿಂದ ಹೊರಗಿನಿಂದ ಶಟರ್ ಎಳೆದು ಬೂತ್ ಅನ್ನು ಲಾಕ್ ಮಾಡಿದ್ದಾರೆ.

 

ಇದರಿಂದ ಇಬ್ಬರೂ ಆರೋಪಿಗಳು ಎಟಿಎಂ ಒಳಗೇ ಸಿಲುಕಿಕೊಂಡಿದ್ದಾರೆ. ಬಳಿಕ ಸರಿತಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಟರ್ ತೆರೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ ದರೋಡೆಗೆ ಬಳಸುತ್ತಿದ್ದ ಪರಿಕರಗಳನ್ನೂ ವಶಪಡಿಸಿಕೊಂಡಿದ್ದಾರೆ.

 

ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಎಟಿಎಂನಲ್ಲಿ ₹16.09 ಲಕ್ಷಕ್ಕೂ ಅಧಿಕ ಹಣ ಇಡಲಾಗಿತ್ತು ಎಂದು ತಿಳಿದುಬಂದಿದೆ. ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ ದರೋಡೆ ಯತ್ನವನ್ನು ತಡೆದ ಮ್ಯಾನೇಜರ್ ಸರಿತಾ ಚೌಧರಿ ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.