ಪುತ್ತೂರು: ನಗರದ ಮುಖ್ಯ ರಸ್ತೆಯಲ್ಲಿರುವ ಸೋಜಾ ಅಲ್ಯೂಮಿನಿಯಂ ಅಂಗಡಿಯ ಮುಂಭಾಗದ ಹಳೆಯ ಕಟ್ಟಡವೊಂದರಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದ್ದು, ತಕ್ಷಣದ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಬೆಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ನಿರ್ದೇಶಕ ರವಿಕುಮಾರ್ ರೈ ಕೆದಂಬಾಡಿ ಮಠ ಅವರು ಕಟ್ಟಡದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಜೊತೆಗೆ ಪುತ್ತೂರು ನಗರ ಪೊಲೀಸ್ ಠಾಣೆಗೂ ತೆರಳಿ ಘಟನೆಯ ಕುರಿತು ತಿಳಿಸಿದರು.
ಮಾಹಿತಿ ಲಭಿಸಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಮುಂಜಾನೆಯ ವೇಳೆಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ರವಿಕುಮಾರ್ ರೈ ಅವರು ಸಮಯಪ್ರಜ್ಞೆ ಮೆರೆದು ತಕ್ಷಣ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಶೀಘ್ರವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು.
ಸಮಯಕ್ಕೆ ಸರಿಯಾಗಿ ಮಾಹಿತಿ ರವಾನೆಯಾದ ಪರಿಣಾಮ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ನೆರವಾಯಿತು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.





