13 October 2026 |

ಮಂಗಳೂರು: ಸೋಮೇಶ್ವರ ಕಡಲತೀರದಲ್ಲಿ ನಾಪತ್ತೆಯಾಗಿದ್ದ ಉಜಿರೆ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ

  • 12 Oct 2026 10:48:48 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಪೆರಿಬೈಲ್ ಕಡಲತೀರದಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿ ಶೋಭಿತ್ ಎಂ. ಗೌಡ ಅವರ ಮೃತದೇಹ ಪತ್ತೆಯಾಗಿದೆ. ಕೋಟೆಪುರದ ಸ್ಥಳೀಯ ಮೀನುಗಾರರು ದೋಣಿಯ ನೆರವಿನಿಂದ ಮೃತದೇಹವನ್ನು ಪತ್ತೆಹಚ್ಚಿ ದಡಕ್ಕೆ ತಂದಿದ್ದಾರೆ.

 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ಮೂಲದ ಶೋಭಿತ್, ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಒಂಬತ್ತು ಮಂದಿ ಸ್ನೇಹಿತರೊಂದಿಗೆ ಕುತ್ತಾರಿನ ಸ್ವಾಮಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಎಲ್ಲರೂ ಸೋಮೇಶ್ವರದ ಕಡಲತೀರಕ್ಕೆ ತೆರಳಿದ್ದರು.

 

ಈ ಸಂದರ್ಭದಲ್ಲಿ ಶೋಭಿತ್ ಮತ್ತು ಅವರ ಸ್ನೇಹಿತ ಆಕಾಶ್ ಸಮುದ್ರಕ್ಕೆ ಇಳಿದಿದ್ದರು. ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಈಜಲು ತಿಳಿದಿದ್ದ ಆಕಾಶ್ ಅಲೆಗಳನ್ನು ಎದುರಿಸಿ ದಡ ಸೇರಿದ್ದಾರೆ. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ವಿದ್ಯಾರ್ಥಿ ನಾಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಕರಾವಳಿ ಭದ್ರತಾ ಪೊಲೀಸ್ ಪಡೆ, ಗೃಹ ರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಸತತ ಹುಡುಕಾಟದ ಬಳಿಕ ಶೋಭಿತ್ ನಾಪತ್ತೆಯಾಗಿದ್ದ ಪ್ರದೇಶದಲ್ಲೇ ಅವರ ಮೃತದೇಹ ಪತ್ತೆಯಾಗಿದೆ.

 

ಶೋಭಿತ್ ತಮ್ಮ ತಂದೆ-ತಾಯಿಯ ಏಕೈಕ ಪುತ್ರರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.