13 October 2026 |

ದೆಹಲಿ ಪ್ರತಿಭಟನೆಗೆ ಪೊಲೀಸ್ ಕಟ್ಟೆಚ್ಚರ: ಆರು ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ನಿರ್ಬಂಧ

  • 12 Oct 2026 11:43:34 AM

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿರುದ್ಧ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸುಪ್ರೀಂ ಕೋರ್ಟ್‌ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

 

ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಜನರ ಸಂಚಾರದ ಮೇಲೂ ನಿಗಾ ಇರಿಸಲಾಗಿದೆ.

 

ಭದ್ರತಾ ದೃಷ್ಟಿಯಿಂದ ಅಕ್ಟೋಬರ್ 12ರಂದು ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಪಟೇಲ್ ಚೌಕ್, ಜನಪಥ್, ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯಟ್ ಹಾಗೂ ಬಾರಾಖಂಬಾ ರಸ್ತೆ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆದರೆ, ಈ ನಿಲ್ದಾಣಗಳಲ್ಲಿ ಒಂದು ಮೆಟ್ರೋ ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಬದಲಾಯಿಸುವ ಸೌಲಭ್ಯಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ವರದಿಯಾಗಿದೆ.

 

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಈ ಬೆಳವಣಿಗೆಯ ನಡುವೆ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ.