20 October 2026 |

ಕೊಕ್ಕಡದಲ್ಲಿ ಅಂಗಡಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ; ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

  • 19 Oct 2026 09:53:40 AM

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ. ಈ ವೇಳೆ ಹಲ್ಲೆ, ಸೊತ್ತುಗಳಿಗೆ ಹಾನಿ ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪಗಳು ಕೇಳಿಬಂದಿವೆ. ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

 

ಕೃಷ್ಣ ಭಟ್ ಅವರು ನೀಡಿದ ದೂರಿನ ಪ್ರಕಾರ, ಅಕ್ಟೋಬರ್ 18ರಂದು ಬೆಳಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರು ವ್ಯಾಪಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಹರೀಶ್, ಅವರ ಪತ್ನಿ, ಮಕ್ಕಳು ಹಾಗೂ ಇತರರು ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸುಮಾರು ₹25 ಸಾವಿರ ಮೌಲ್ಯದ ಕಟ್ಟಡ ಮತ್ತು ಇತರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ರಾಘವ ಭಂಡಾರಿ ಹಾಗೂ ಅವರ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 78/2026ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಇದೇ ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಹರಿಶ್ಚಂದ್ರ ಅವರ ಪತ್ನಿ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಪ್ರಕಾರ, ಸೌತಡ್ಕ ದೇವಸ್ಥಾನದ ಸಮೀಪ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹರಿಶ್ಚಂದ್ರ ಅವರ ಅಂಗಡಿಗೆ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಮತ್ತು ಚೇತನ್ ಎಂಬವರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರಗೆ ಎಸೆದು, ಹರಿಶ್ಚಂದ್ರ, ಅವರ ಪತ್ನಿ ಹಾಗೂ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಈ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026ರ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಒಂದೇ ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ದೂರು ನೀಡಿರುವುದರಿಂದ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣಗಳಲ್ಲಿನ ಆರೋಪಗಳ ಕುರಿತು ಪರಿಶೀಲನೆ ನಡೆಸಿ, ತನಿಖೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.