20 October 2026 |

ಬಂಟ್ವಾಳದಲ್ಲಿ ಭೀಕರ ರಸ್ತೆ ಅಪಘಾತ: ಪಿಕಪ್ ಡಿಕ್ಕಿಗೆ ಇಬ್ಬರು ಯುವಕರ ದುರ್ಮರಣ!

  • 19 Oct 2026 08:48:52 PM

ಬಂಟ್ವಾಳ: ಮೆಲ್ಕಾರ್–ಮುಡಿಪು ರಾಜ್ಯ ಹೆದ್ದಾರಿಯ ಬೋಳಿಯಾರ್ ಪೆಟ್ರೋಲ್ ಬಂಕ್ ಸಮೀಪ ಪಿಕಪ್ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯಗಳು ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.

 

ವೇಗವಾಗಿ ಬಂದ ಮಹೀಂದ್ರಾ ಪಿಕಪ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು, ಕಂಬ ಮುರಿದು ನೆಲಕ್ಕುರುಳಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಮೃತರನ್ನು ಮೊಹಮ್ಮದ್ ಅಶ್ಯಾಕ್ ಮತ್ತು ಜುನೈದ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಮಂಜನಾಡಿ ಮೂಲದವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ.