ಮೈಸೂರು: ಟ್ರಾಫಿಕ್ ಸಿಗ್ನಲ್ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಯುವಕ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡಿದ್ದಾರೆ.
ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕೊಳಂಬೆ ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಮನೋಹರ ಎಂದು ಗುರುತಿಸಲಾಗಿದೆ. ಅವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಕೊಲ್ಲೂರಿನ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಹರ ಮತ್ತು ದೀಕ್ಷಿತ್, ದಸರಾ ಉತ್ಸವವನ್ನು ವೀಕ್ಷಿಸುವ ಉದ್ದೇಶದಿಂದ ಅಕ್ಟೋಬರ್ 18ರಂದು ಬೈಕ್‌ನಲ್ಲಿ ಮೈಸೂರಿಗೆ ತೆರಳಿದ್ದರು. ಈ ವೇಳೆ ಟ್ರಾಫಿಕ್ ಸಿಗ್ನಲ್ ಸಮೀಪ ಬೈಕ್ ಅಪಘಾತಕ್ಕೀಡಾಗಿದೆ.
ಅಪಘಾತದ ರಭಸಕ್ಕೆ ಮನೋಹರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹಸವಾರ ದೀಕ್ಷಿತ್ ಗಾಯಗೊಂಡಿದ್ದು, ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





