ಬೆಂಗಳೂರು: ಕರ್ನಾಟಕದ ವಿಧಾನಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ತಯಾರಿಸಿದ ನಕಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ಬೆಂಗಳೂರು ಪೊಲೀಸರು ಬಿಹಾರ ಮೂಲದ 25 ವರ್ಷದ ಹಜರತ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ.
ವಿಧಾನಸೌಧ ಕಟ್ಟಡದಲ್ಲಿ ಭಾರೀ ಸ್ಫೋಟ ಸಂಭವಿಸಿ ಕಟ್ಟಡಕ್ಕೆ ಹಾನಿಯಾಗಿರುವಂತೆ ವಿಡಿಯೋದಲ್ಲಿ ದೃಶ್ಯಗಳನ್ನು ಸೃಷ್ಟಿಸಲಾಗಿತ್ತು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆರೋಪದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದು ನೈಜ ಘಟನೆಯ ದೃಶ್ಯವಲ್ಲ, AI ಮೂಲಕ ಸಿದ್ಧಪಡಿಸಲಾದ ನಕಲಿ ವಿಡಿಯೋ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಡಿಯೋ ಸಿದ್ಧಪಡಿಸುವ ಹಿಂದಿನ ಉದ್ದೇಶವೇನು ಮತ್ತು ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.





