22 October 2026 |

ಮೂಡುಬಿದಿರೆಯಲ್ಲಿ ವಿದ್ಯುತ್ ಅವಘಡಕ್ಕೆ ತಾಯಿ, ಮಗ ಬಲಿ: ವರ್ಣಬೆಟ್ಟುವಿನಲ್ಲಿ ದುರಂತ

  • 22 Oct 2026 05:01:27 PM

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡವೊಂದರಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಈ ದುರ್ಘಟನೆಯಿಂದ ಸ್ಥಳೀಯರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

 

ಮೃತರನ್ನು 45 ವರ್ಷದ ಮರ್ಸಿ ಮಸ್ಕರೇನಸ್ ಹಾಗೂ ಅವರ 18 ವರ್ಷದ ಪುತ್ರ ಶೋನ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ಮನೆಯ ಸಮೀಪ ಬಟ್ಟೆ ಒಣಗಿಸಲು ಹಾಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

 

ಬಟ್ಟೆ ಒಣಗಿಸಲು ಬಳಸುತ್ತಿದ್ದ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದರಿಂದ ವಿದ್ಯುತ್ ಪ್ರವಹಿಸಿದೆ. ಈ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾದ ಮಗನನ್ನು ರಕ್ಷಿಸಲು ತಾಯಿ ಮುಂದಾಗಿದ್ದು, ಅವರಿಗೂ ವಿದ್ಯುತ್ ತಗುಲಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಮೃತ ಶೋನ್ ಮಸ್ಕರೇನಸ್ ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದರು. ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬನ ಗಮನಕ್ಕೆ ಘಟನೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

 

ವಿಷಯ ತಿಳಿದ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರಿದಿದೆ.

 

ಒಂದೇ ಮನೆಯ ತಾಯಿ ಮತ್ತು ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ವರ್ಣಬೆಟ್ಟುವಿನಲ್ಲಿ ಈ ದುರ್ಘಟನೆ ಶೋಕದ ವಾತಾವರಣ ಸೃಷ್ಟಿಸಿದೆ.