27 October 2026 |

ಕೆರೆಯಲ್ಲಿ ಮುಳುಗಿ ಇಬ್ಬರು 13 ವರ್ಷದ ಬಾಲಕಿಯರ ದುರ್ಮರಣ

  • 26 Oct 2026 08:18:04 PM

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆ ಪ್ರದೇಶದಲ್ಲಿ ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಮೃತ ಬಾಲಕಿಯರಿಬ್ಬರೂ 13 ವರ್ಷದವರಾಗಿದ್ದು, ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

 

ಮೃತರನ್ನು ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪದವರಾದ ಚಂದ್ರು ಬಸವರಾಜ ವೇಷಗಾರ ಮತ್ತು ಮಂಜಕಾಳು ದಂಪತಿಯ ಪುತ್ರಿ ಸುನೀತಾ (13) ಹಾಗೂ ದಿವಂಗತ ಮಂಜುನಾಥ ಮತ್ತು ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಈ ಕುಟುಂಬಗಳು ಮುಳ್ಳಿಕಟ್ಟೆ ಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದವು. ಸುನೀತಾ ಮತ್ತು ವೈಶಾಲಿ ಇಬ್ಬರೂ ಹೊಸಾಡು ಸರ್ಕಾರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದರು.

 

ಭಾನುವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಗುಡಿಸಲಿನಲ್ಲಿ ವಾಸವಿದ್ದ ಐವರು ಮಕ್ಕಳು ಬಟ್ಟೆ ತೊಳೆಯಲು ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿರುವ ಕಡುಬಿನ ಕೆರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೆರೆಯ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಸುನೀತಾ ಮತ್ತು ವೈಶಾಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

 

ಈಜಲು ತಿಳಿಯದ ಕಾರಣ ಇಬ್ಬರೂ ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಬಾಲಕಿಯರ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.