ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಶಿರಾ ತಾಲೂಕಿನ ತಾವರೆಕೆರೆ ಸಮೀಪ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ.
ಮೃತರನ್ನು ನಿಸರ್ಗ (20) ಮತ್ತು ರೂಪಾ (21) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಐವರಿಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಬಿಜಾಪುರದಿಂದ ಬೆಂಗಳೂರಿನತ್ತ ಡಿಸೈರ್ ಕಾರಿನಲ್ಲಿ ಮೂವರು ಯುವತಿಯರು ಹಾಗೂ ಚಾಲಕ ಪ್ರಯಾಣಿಸುತ್ತಿದ್ದರು. ಬಿ.ಫಾರ್ಮಾ ಪದವಿ ಪೂರ್ಣಗೊಳಿಸಿದ್ದ ಯುವತಿಯರು ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಪ್ರಯಾಣದ ವೇಳೆ ಚಾಲಕ ಪವನ್ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ವಿಭಜಕವನ್ನು ದಾಟಿ ಎದುರಿನಿಂದ ಬರುತ್ತಿದ್ದ ಟಾಟಾ ಕಾರಿಗೆ ಅಪ್ಪಳಿಸಿದೆ.
ಅಪಘಾತದ ತೀವ್ರತೆಗೆ ನಿಸರ್ಗ ಮತ್ತು ರೂಪಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಸೈರ್ ಕಾರಿನಲ್ಲಿದ್ದ ಮತ್ತೊಬ್ಬ ಯುವತಿ ಹಾಗೂ ಚಾಲಕ ಪವನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಟಾಟಾ ಕಾರಿನಲ್ಲಿದ್ದ ನಾಲ್ವರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶಿರಾ ಡಿವೈಎಸ್‌ಪಿ ಹಾಗೂ ಶಿರಾ ಗ್ರಾಮಾಂತರ ಸಿಪಿಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





