28 October 2026 |

ದೇರಳಕಟ್ಟೆಯ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ: ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು

  • 28 Oct 2026 11:58:26 AM

ಮಂಗಳೂರು: ದೇರಳಕಟ್ಟೆಯ ವೈದ್ಯಕೀಯ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ನಿವಾಸಿ ಅಕ್ಷಯ್ ವಿ.ಎಸ್. (21) ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

 

ದೂರಿನ ಪ್ರಕಾರ, ಅಕ್ಟೋಬರ್ 2ರಂದು ಮಧ್ಯಾಹ್ನ ರೆಸ್ಟೋರೆಂಟ್ ಸಮೀಪ ಅಕ್ಷಯ್ ಇದ್ದಾಗ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಶಬ್ ಮತ್ತು ಅಸ್ಪಕ್ ಅಲ್ಲಿಗೆ ಬಂದಿದ್ದರು. ಈ ವೇಳೆ ಅಸ್ಪಕ್, ಕ್ಯಾಂಪಸ್ ಹೊರಗೆ ಸಮವಸ್ತ್ರವಿಲ್ಲದೆ ತಿರುಗಾಡದಂತೆ ಎಚ್ಚರಿಕೆ ನೀಡಿ, ಮಾತು ಕೇಳದಿದ್ದರೆ ಕೈಕಾಲು ಮುರಿದು ಕಾಲೇಜಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 

ನಂತರ ಅಕ್ಟೋಬರ್ 15ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಕ್ಷಯ್ ಹಾಗೂ ಅವರ ಸ್ನೇಹಿತರಾದ ಝಾಹಿದ್, ಶಹಜಾದ್, ಹುಸೈರ್, ರೋವನ್, ಅಲ್ಪಾಝ್ ಮತ್ತು ಆದಿರ್ ಊಟಕ್ಕಾಗಿ ಕಾಲೇಜಿನ ಎದುರಿನ ಹೋಟೆಲ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಶಬ್, ಝಾಹಿದ್‌ನ ಮೊಬೈಲ್‌ಗೆ ಕರೆ ಮಾಡಿ ಕ್ಲಾಕ್ ಟವರ್ ಸಮೀಪ ಬರುವಂತೆ ತಿಳಿಸಿದ್ದಾನೆ ಎನ್ನಲಾಗಿದೆ.

 

ಅಲ್ಲಿಗೆ ಹೋದ ವಿದ್ಯಾರ್ಥಿಗಳನ್ನು ಸಮೀಪದ ಮತ್ತೊಂದು ಹೋಟೆಲ್‌ನ ಕೊಠಡಿಗೆ ಕರೆದೊಯ್ದು ಒಳಗೆ ಕೂಡಿ ಹಾಕಲಾಗಿತ್ತು. ಬಳಿಕ ಹಾಡು ಹಾಡುವಂತೆ ಒತ್ತಾಯಿಸಿ, ಹಾಡದಿದ್ದರೆ ಹೊರಗೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಭಯದಿಂದ ವಿದ್ಯಾರ್ಥಿಗಳು ಹಾಡಿದ್ದು, ಅದನ್ನು ಅಶಬ್ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಇತರರಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

 

ಅಕ್ಟೋಬರ್ 22ರಂದು ಅಶಬ್ ಸೇರಿದಂತೆ ಇತರ ವಿದ್ಯಾರ್ಥಿಗಳು ಮತ್ತೊಬ್ಬ ವಿದ್ಯಾರ್ಥಿಗೂ ರ‍್ಯಾಗಿಂಗ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿವಿಧ ದಿನಗಳಲ್ಲಿ ವಿದ್ಯಾರ್ಥಿಗಳು ಬಂದು ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕುತ್ತಿದ್ದರು. ಈ ಘಟನೆಗಳ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಕಬರಸ್ತಾನ್‌ಗೆ ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪವೂ ಇದೆ.

 

ಈ ಹಿನ್ನೆಲೆಯಲ್ಲಿ ಅಶಬ್, ಅಸ್ಪಕ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಕ್ಷಯ್ ಪೊಲೀಸರಿಗೆ ಮನವಿ ಮಾಡಿದ್ದಾರೆ.