ಮೂಡುಬಿದಿರೆ: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರು ಬಳಿ ಶುಕ್ರವಾರ ನಡೆದಿದೆ.
ಮೃತ ಯುವಕನನ್ನು ತೋಡಾರು ನಿವಾಸಿ ರಿಫಾಝ್ (19) ಎಂದು ಗುರುತಿಸಲಾಗಿದೆ. ಅವರು ಮೂಡುಬಿದಿರೆಯ ಹಣ್ಣು ಹಂಪಲು ಮಾರಾಟದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿದ್ದ 'ಅಭಿಮಾನ್' ಹೆಸರಿನ ಖಾಸಗಿ ಬಸ್ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಸಾಗಬೇಕಿದ್ದ ಬಸ್, ವಿರುದ್ಧ ದಿಕ್ಕಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ, ಎದುರಿನಿಂದ ಬರುತ್ತಿದ್ದ ರಿಫಾಝ್ ಅವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ರಿಫಾಝ್ ಮೃತಪಟ್ಟಿದ್ದಾರೆ.





