01 November 2026 |

ಕಲಬುರಗಿಯಲ್ಲಿ ಬೀದಿ ನಾಯಿಗಳ ಹಾವಳಿ: ದಾಳಿಗೆ ನಾಲ್ಕು ವರ್ಷದ ಬಾಲಕ ಸಾವು, 13 ಮಂದಿಗೆ ಗಾಯ!

  • 01 Nov 2026 02:11:39 PM

ಕಲಬುರಗಿ: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ದರಿಯಾಪುರ ಪ್ರದೇಶದಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ನಾಲ್ಕು ವರ್ಷದ ಮನೋಜ್ ಪೂಜಾರಿ ಎಂಬ ಬಾಲಕ ಮೃತಪಟ್ಟಿದ್ದಾನೆ.

 

ಗಣದೇವತೆ ದೇವಸ್ಥಾನದ ಬಳಿಯಲ್ಲಿ ಆಟವಾಡುತ್ತಿದ್ದ ಮನೋಜ್ ಮೇಲೆ ಏಕಾಏಕಿ ನಾಯಿ ದಾಳಿ ಮಾಡಿದೆ. ದಾಳಿಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

 

ಇದರ ಬೆನ್ನಲ್ಲೇ ಕಲಬುರಗಿ ನಗರದ ಮತ್ತೊಂದು ಪ್ರದೇಶದಲ್ಲಿ ಬೀದಿ ನಾಯಿಯ ದಾಳಿಯಿಂದ 13 ಮಂದಿ ಗಾಯಗೊಂಡಿರುವ ಘಟನೆಯೂ ವರದಿಯಾಗಿದೆ.

 

ನಿರಂತರವಾಗಿ ನಡೆಯುತ್ತಿರುವ ಇಂತಹ ಘಟನೆಗಳಿಂದ ನಗರದ ಜನರಲ್ಲಿ ಭೀತಿ ಹೆಚ್ಚಾಗಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದು, ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.