ಬೆಂಗಳೂರು: ಕಳ್ಳತನ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯಲ್ಲಿದ್ದ ಯುವತಿಯನ್ನು ಹಿಡಿದು ಎಳೆದಾಡಿ ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ತನ್ನನ್ನು ಹಿಡಿಯಲು ಯಾರಾದರೂ ಮುಂದಾದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
ಬಂಧಿತ ಆರೋಪಿಯನ್ನು ಪ್ರಭುರಾಜ್ ಅಲಿಯಾಸ್ ರಾಜ್ ಎಂದು ಗುರುತಿಸಲಾಗಿದೆ. ಈತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಕಳ್ಳತನಕ್ಕೆ ಬಂದಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ.
ಈ ವೇಳೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಆರೋಪಿ, ಸಮೀಪದ ಅಂಗಡಿಯಲ್ಲಿದ್ದ ಯುವತಿಯೊಬ್ಬಳನ್ನು ಬಲವಂತವಾಗಿ ಹಿಡಿದು ಎಳೆದಾಡಿದ್ದಾನೆ. ಅಲ್ಲದೆ, ತನ್ನನ್ನು ಹಿಡಿಯಲು ಯಾರಾದರೂ ಬಂದರೆ ಯುವತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿಯ ವರ್ತನೆ ಮಿತಿಮೀರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು ಪ್ರಭುರಾಜ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿಯನ್ನು ಎಳೆದಾಡಿ ಬೆದರಿಕೆ ಹಾಕಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.





